ADVERTISEMENT

ಎದುರಾಳಿ ತಂಡದ ಮೇಲೆ 8ನೇ ಸಲ ಫಾಲೋಅನ್ ಹೇರಿದ ಕೊಹ್ಲಿ: ಕ್ಲೀನ್‌ಸ್ವೀಪ್‌ನತ್ತ ಭಾರತ

ಟೆಸ್ಟ್‌ ಕ್ರಿಕೆಟ್‌: ಮೂರನೇ ಗೆಲುವಿಗೆ ಬೇಕಿರುವುದು ಎರಡೇ ವಿಕೆಟ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 11:29 IST
Last Updated 24 ಅಕ್ಟೋಬರ್ 2019, 11:29 IST
   

ರಾಂಚಿ:ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬಿಗಿಹಿಡಿತ ಸಾಧಿಸಿದ್ದು, ಸರಣಿ ಕ್ಲೀನ್‌ ಸ್ವೀಪ್‌ನತ್ತ ಮುನ್ನಡೆದಿದೆ. ಮೊದಲ ಇನಿಂಗ್ಸ್‌ನಲ್ಲಿ 335ರನ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಹರಿಣಗಳು ಎರಡನೇಇನಿಂಗ್ಸ್‌ನಲ್ಲೂ ಪೆವಿಲಿಯನ್‌ ಪೆರೇಡ್‌ ಮುಂದುವರಿಸಿದ್ದಾರೆ.

ಇಲ್ಲಿನಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಪಡೆ 9 ವಿಕೆಟ್‌ ನಷ್ಟಕ್ಕೆ 497ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಆಫ್ರಿಕಾ, ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.

ಆತಿಥೇಯ ಬೌಲರ್‌ಗಳನ್ನು ಎದುರಿಸಲು ತಿಣುಕಾಡಿದ ಪ್ರವಾಸಿ ಪಡೆ ಮೊದಲ ಇನಿಂಗ್ಸ್‌ನಲ್ಲಿ ಕೇವಲ 162ರನ್‌ ಗಳಿಗೆ ಆಲೌಟ್‌ ಆಯಿತು. ಸದ್ಯ ಎರಡನೇ ಇನಿಂಗ್ಸ್‌ನಲ್ಲಿ ಫಾಫ್‌ ಡು ಪ್ಲೆಸಿ ಪಡೆ, 132ರನ್‌ ಗಳಿಗೆ ಪ್ರಮುಖ ಎಂಟು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.ವೇಗಿಗಳಾದ ಮೊಹಮದ್‌ ಶಮಿ, ಉಮೇಶ್‌ ಯಾದವ್‌ ಕ್ರಮವಾಗಿ 3, 2 ವಿಕೆಟ್‌ ಪಡೆದರೆ,ಆಲ್ರೌಂಡರ್‌ ರವೀಂದ್ರ ಜಡೇಜಾ, ಆರ್‌ ಅಶ್ವಿನ್‌ ತಲಾ ಒಂದು ವಿಕೆಟ್‌ ಉರುಳಿಸಿ ಪ್ರವಾಸಿ ಪಡೆಯ ಬ್ಯಾಟಿಂಗ್‌ ಬೆನ್ನೆಲುಬು ಮುರಿದಿದ್ದಾರೆ. ಸೋಲು ತಪ್ಪಿಸಿಕೊಳ್ಳಬೇಕಾದರೆ ಈ ತಂಡವು ಉಳಿದಿರುವ ಎರಡು ವಿಕೆಟ್‌ಗಳಿಂದ 203ರನ್‌ಗಳ ಬಾಕಿ ಚುಕ್ತಾ ಮಾಡಬೇಕಿದೆ. ಅಷ್ಟಲ್ಲದೆ ಭಾರತಕ್ಕೆ ಸವಾಲಿನ ಗುರಿಯನ್ನೂ ನೀಡಬೇಕಿದೆ.

ADVERTISEMENT

ಇನ್ನೂ ಎರಡು ದಿನಗಳ ಆಟ ಬಾಕಿ ಇರುವುದರಿಂದ ಪ್ಲೆಸಿ ಪಡೆ ಸೋಲು ತಪ್ಪಿಸಿಕೊಳ್ಳುವುದು ಅಸಾಧ್ಯ.

ಹೆಚ್ಚು ರನ್‌ ಅಂತರದ ಮುನ್ನಡೆ
ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡವು 335ರನ್‌ ಅಂತರದ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ದಾಖಲಿಸಿದ ಎರಡನೇ ಅತಿದೊಡ್ಡ ಅಂತರದ ಮುನ್ನಡೆಯಾಗಿದೆ. 2009/10ರಲ್ಲಿ ಕೊಲ್ಕತ್ತದಲ್ಲಿ ನಡೆದ ಟೆಸ್ಟ್‌ನಲ್ಲಿ 347ರನ್‌ ಮುನ್ನಡೆ ಸಾಧಿಸಿದ್ದು, ದಾಖಲೆಯಾಗಿದೆ.

ಇದೇ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಕೊಹ್ಲಿ ಪಡೆ 326ರನ್‌ ಮುನ್ನಡೆ ಸಾಧಿಸಿತ್ತು. ಇದು ಮೂರನೇ ಸ್ಥಾನದಲ್ಲಿದೆ.

ಸತತ ಐದು ಇನಿಂಗ್ಸ್‌ಗಳಲ್ಲಿ 3ಕ್ಕಿಂತ ಹೆಚ್ಚು ವಿಕೆಟ್‌: ಉಮೇಶ್‌ ಸಾಧನೆ
ಉಮೇಶ್‌ ಯಾದವ್‌ ದೇಶದಲ್ಲಿ ಆಡಿದ ಕಳೆದ ಐದು ಇನಿಂಗ್ಸ್‌ಗಳಲ್ಲಿ ಸತತವಾಗಿ ಮೂರು ಮತ್ತು ಅದಕ್ಕಿಂತ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ಭಾರತ ಪರ ಈ ಸಾಧನೆ ಮಾಡಿದ ಮೊದಲ ವೇಗಿ ಎನಿಸಿದರು.

2018ರಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಟೆಸ್ಟ್‌ನಲ್ಲಿ ಕ್ರಮವಾಗಿ 88ಕ್ಕೆ 6, 45ಕ್ಕೆ 4 ಗಳಿಸಿದ್ದರು. ದಕ್ಷಿಣ ಆಫ್ರಿಕಾ ಎದುರು ಸದ್ಯ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ 37ಕ್ಕೆ 3, 22ಕ್ಕೆ 3 ಹಾಗೂ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 40 ರನ್ ನೀಡಿ 3 ವಿಕೆಟ್‌ ಗಳಿಸಿದ್ದಾರೆ. (ಎರಡನೇ ಇನಿಂಗ್ಸ್‌ ಮುಂದುವರಿದಿದೆ. ಉಮೇಶ್‌ ಯಾದವ್‌ ಎರಡು ವಿಕೆಟ್‌ ಉರುಳಿಸಿದ್ದಾರೆ. ಆ ಅಂಕಿಅಂಶವನ್ನು ಇಲ್ಲಿ ಉಲ್ಲೇಖಿಸಿಲ್ಲ)

ಎಂಟನೇ ಬಾರಿ ಫಾಲೋಅನ್‌ ಹೇರಿದ ವಿರಾಟ್‌ ಕೊಹ್ಲಿ
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಇದುವರೆಗೆ 8 ಬಾರಿ ಎದುರಾಳಿ ತಂಡದ ಮೇಲೆ ಫಾಲೋಆನ್‌ ಹೇರಿದ್ದಾರೆ. ಇದು ಉಳಿದೆಲ್ಲ ನಾಯಕರಿಗಿಂತ ಹೆಚ್ಚು. ಇದಕ್ಕೂ ಮೊದಲು ಮೊಹಮದ್‌ ಅಜರುದ್ದೀನ್‌ 7 ಸಲ, ಮಹೇಂದ್ರ ಸಿಂಗ್‌ 5 ಬಾರಿ ಮತ್ತು ಸೌರವ್‌ ಗಂಗೂಲಿ 4 ಸಲ ಎದುರಾಳಿ ತಂಡದ ಮೇಲೆ ಫಾಲೋಆನ್‌ ಹೇರಿದ್ದರು.

4.83ಸರಾಸರಿಯಲ್ಲಿ ರನ್‌ ಕಲೆಹಾಕಿದಆಫ್ರಿಕಾದ ಆರಂಭಿಕ ಜೋಡಿ
ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಜೋಡಿಯು ಮೂರು ಪಂದ್ಯಗಳ ಆರು ಇನಿಂಗ್ಸ್‌ಗಳಲ್ಲಿ ಮೊದಲ ವಿಕೆಟ್‌ಗೆ ಕಲೆಹಾಕಿದ್ದು ಕೇವಲ 29 ರನ್‌. ಅಂದರೆ, ಮೊದಲ ವಿಕೆಟ್‌ ಜೊತೆಯಾಟದಲ್ಲಿ ದಾಖಲಾದದ್ದು ಸರಾಸರಿ 4.83 ರನ್‌ ಅಷ್ಟೇ. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಸರಣಿಯೊಂದರಲ್ಲಿ ಕ್ಕಿಂತ ಹೆಚ್ಚು ಇನಿಂಗ್ಸ್‌ಗಳನ್ನು ಆಡಿದ ತಂಡವೊಂದರ ಆರಂಭಿಕ ಜೋಡಿ ಕಲೆ ಹಾಕಿದ ನಾಲ್ಕನೇ ಕನಿಷ್ಠ ರನ್‌ ಸರಾಸರಿ.

ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಎಡಿನ್‌ ಮಾರ್ಕರ್ಮ್‌–ಡೀನ್‌ ಎಲ್ಗರ್‌ ಜೋಡಿ ಕ್ರಮವಾಗಿ 14, 4 ರನ್‌ ಕೂಡಿಸಿತ್ತು. ಎರಡನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿಯೂ ಇದೇ ಜೋಡಿ ಕ್ರಮವಾಗಿ 2, 0 ರನ್‌ ಗಳಿಸಿತ್ತು.ಮೂರನೇ ಪಂದ್ಯದಲ್ಲಿ ಕ್ವಿಂಟನ್‌ ಡಿ ಕಾಕ್‌–ಡೀನ್‌ ಎಲ್ಗರ್‌ ಮೊದಲ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಕ್ರಮವಾಗಿ 4, 5 ರನ್‌ ಕಲೆಹಾಕಿದ್ದರು.

1990–91ರಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ವೆಸ್ಟ್‌ಇಂಡೀಸ್‌ ವಿರುದ್ಧ 3.33 ಸರಾಸರಿಯಲ್ಲಿ ರನ್‌ ಗಳಿಸಿತ್ತು. ಶ್ರೀಲಂಕಾ ತಂಡದ ಆರಂಭಿಕ ಜೋಡಿ2006ರಲ್ಲಿ ಇಂಗ್ಲೆಂಡ್‌ ವಿರುದ್ಧ ಹಾಗೂ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 3.83, 4.50 ಸರಾಸರಿಯಲ್ಲಿ ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌
ಭಾರತ: ಮೊದಲ ಇನಿಂಗ್ಸ್‌ 479/9
ರೋಹಿತ್‌ ಶರ್ಮಾ 212
ಅಜಿಂಕ್ಯ ರಹಾನೆ 115
ರವೀಂದ್ರ ಜಡೇಜಾ 51

ಜಾರ್ಜ್‌ ಲಿಂಡೆ 133/4
ಕಗಿಸೊ ರಬಡ 85/3

ದಕ್ಷಿಣ ಆಫ್ರಿಕಾ:ಮೊದಲ ಇನಿಂಗ್ಸ್‌ 162/10
ಜುಬೇರ್‌ ಹಮ್ಜಾ 62
ಜಾರ್ಜ್‌ ಲಿಂಡೆ 37
ತೆಂಬಾ ಬವುಮ 32

ಉಮೇಶ್‌ ಯಾದವ್‌ 40/3
ರವೀಂದ್ರ ಜಡೇಜಾ 19/2
ಮೊಹಮದ್‌ ಶಮಿ 22/2
ಶಹಬಾಜ್‌ ನದೀಮ್‌ 22/2

ದಕ್ಷಿಣ ಆಫ್ರಿಕಾ:ಎರಡನೇ ಇನಿಂಗ್ಸ್‌ 132/8
ತಿಯಾನಿಸ್ ಡಿ ಬ್ರಯನ್ 24*
ಜಾರ್ಜ್‌ ಲಿಂಡೆ 27
ಡೇನ್ ಪೀಟ್ 23
ತೆಂಬಾ ಬವುಮ 32

ಮೊಹಮದ್‌ ಶಮಿ 10/3
ಉಮೇಶ್‌ ಯಾದವ್‌ 35/2
ರವೀಂದ್ರ ಜಡೇಜಾ 27/1
ಆರ್‌.ಅಶ್ವಿನ್‌ 22/1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.