ಮೊಹಮ್ಮದ್ ಶಮಿ
ವೃತ್ತಿ ಜೀವನದ ಕಥೆ ಮುಗಿಯಿತು. ಭಾರತವನ್ನು ಪ್ರತಿನಿಧಿಸುವ ಮತ್ತೊಂದು ಅವಕಾಶ ಸಿಗುವುದೇ ಇಲ್ಲ ಎಂದು ನೊಂದುಕೊಂಡಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ ಆಗಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ದೀರ್ಘಾವಧಿಗೆ ತಂಡದಿಂದ ಹೊರಗುಳಿದಿದ್ದ ಅವರು ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ. ಹೋರಾಟದ ದಿನಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳೆ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ಶಮಿಗೆ, ಮೈದಾನಕ್ಕೆ ಮರಳುವ ವಿಶ್ವಾಸವೇ ಇರಲಿಲ್ಲ. ಆದರೆ, ಚಿಕಿತ್ಸೆ ಹಾಗೂ ಕಠಿಣ ಪರಿಶ್ರಮದಿಂದಾಗಿ ಚೇತರಿಸಿಕೊಂಡಿರುವ ಶಮಿ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ನಿಗದಿತ ಓವರ್‌ಗಳ ಸರಣಿಯ ಮೂಲಕ ಭಾರತ ತಂಡಕ್ಕೆ ವಾಪಸ್ ಆಗಿದ್ದಾರೆ.
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿರುವ ಅವರು, ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಬಳಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ತಮ್ಮ ಕಷ್ಟದ ದಿನಗಳ ಬಗ್ಗೆ ಶಮಿ ಮಾತನಾಡಿರುವ ವಿಡಿಯೊವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಂಚಿಕೊಂಡಿದೆ.
'ವಿಶ್ವಕಪ್ ವೇಳೆ ಅತ್ಯುತ್ತಮ ಲಯದಲ್ಲಿದ್ದ ನಾನು, ಏಕಾಏಕಿ ಶಸ್ತ್ರಚಿಕಿತ್ಸೆ ಕೊಠಡಿಗೆ ಹೋಗಬೇಕಾದದ್ದನ್ನು ಊಹಿಸಿಕೊಳ್ಳುವುದೂ ಅಸಾಧ್ಯ' ಎಂದು ಶಮಿ ಹೇಳಿಕೊಡಿದ್ದಾರೆ.
'ವೈದ್ಯರಿಗೆ ಕೇಳಿದ ಮೊದಲ ಪ್ರಶ್ನೆ, 'ನಾನು ಮೈದಾನಕ್ಕೆ ಮರಳಲು ಎಷ್ಟು ದಿನಗಳ ಬೇಕಾಗುತ್ತದೆ' ಎಂಬುದು. ಆಗ ಅವರು, 'ನಿಮ್ಮನ್ನು ನಡೆಯುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ. ನಂತರ, ಓಡುವಂತೆ ಮಾಡುವುದು. ಸ್ಪರ್ಧಾತ್ಮಕ ಕ್ರಿಕೆಟ್ ಆಡುವುದು ದೂರದ ಆಲೋಚನೆ ಎಂದು ಹೇಳಿದ್ದರು' ಎಂದು ನೆನಪಿಸಿಕೊಂಡಿದ್ದಾರೆ.
'ಮೈದಾನದಲ್ಲಿ ಸದಾ ಓಡಾಡುತ್ತಿದ್ದವ ಈಗ ಊರುಗೋಲು ಹಿಡಿದು ನಿಂತಿದ್ದೇನೆ. ನಾನು, ಮತ್ತೆ ಓಡಾಡುವುದು ಯಾವಾಗ ಎಂದು ಯಾವಾಗಲೂ ಯೋಜಿಸುತ್ತಿದ್ದೆ' ಎಂದು ಸ್ಮರಿಸಿದ್ದಾರೆ.
'ನನ್ನ ತಲೆಯಲ್ಲಿ ಸಾಕಷ್ಟು ಆಲೋಚನೆಗಳು ಓಡುತ್ತಿದ್ದವು. ಮತ್ತೆ ಅದನ್ನು ಸಾಧಿಸಲು (ಕ್ರೀಡಾಂಗಣಕ್ಕೆ ಮರಳಲು) ಸಾಧ್ಯವೇ? ಊರುಗೋಲಿಲ್ಲದೆ ನಡೆಯಲು ಸಾಧ್ಯವೇ? ಎಂದೆಲ್ಲ ಯೋಚಿಸುತ್ತಿದ್ದೆ. ಈ ರೀತಿಯ ಗಾಯಕ್ಕೆ ತುತ್ತಾಗಿ, 14 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದ ಕಾರಣ, ಮತ್ತೆ ಆಡಲು ನನ್ನಿಂದ ಸಾಧ್ಯವೇ ಎಂಬ ಅನುಮಾನ ಮೂಡಿತ್ತು' ಎಂದಿದ್ದಾರೆ.
ಚೇತರಿಸಿಕೊಳ್ಳುವಲ್ಲಿ ನಿರಂತರವಾಗಿ ಜೊತೆಗಿದ್ದ ಕುಟುಂಬದವರು ಹಾಗೂ ಬಿಸಿಸಿಐಗೆ ಕೃತಜ್ಞತೆ ಹೇಳಿದ್ದಾರೆ ಶಮಿ.
'60 ದಿನಗಳ ಚಿಕಿತ್ಸೆ ಬಳಿಕ ಮೊದಲ ಬಾರಿಗೆ ಪಾದಗಳನ್ನು ನೆಲದ ಮೇಲೆ ಇಡುವಂತೆ ಹೇಳಿದಾಗ, ಎಂದೂ ಆಗದಷ್ಟು ಭಯವಾಗಿತ್ತು. ಈಗಷ್ಟೇ ಹೆಜ್ಜೆ ಇಡಲು ಕಲಿಯುತ್ತಿರುವ ಮಗುವಿನಿಂತೆ ತಡವರಿಸಿದ್ದೆ' ಎಂದು ಹೇಳಿಕೊಂಡಿದ್ದಾರೆ.
'ಧೈರ್ಯ ಮತ್ತು ದೇಶಕ್ಕಾಗಿ ಆಡಬೇಕೆನ್ನುವ ಪ್ಯಾಷನ್, ನನ್ನ ಅತಿದೊಡ್ಡ ಪ್ರೇರಕ ಶಕ್ತಿಗಳು. ಎದೆ ಮೇಲೆ ಭಾರತದ ಬ್ಯಾಡ್ಜ್ ತೊಡಬೇಕು ಎಂಬುದು ನನ್ನನ್ನು ಆ ನಿಟ್ಟಿನಲ್ಲಿ ಮುನ್ನಡೆಸಿತು. ದೇಶಕ್ಕಾಗಿ ಆಡಬೇಕೆನ್ನುವ ತುಡಿತವೇ ನನ್ನನ್ನು ಇಷ್ಟು ದೂರ ತಂದು ನಿಲ್ಲಿಸಿದೆ. ಸಾಕಷ್ಟು ನೋವು ಇತ್ತು. ಆದರೆ, ಸಹಿಸಿಕೊಳ್ಳುವ ಶಕ್ತಿ ಮತ್ತು ತಾಳ್ಮೆಯಿಂದಾಗಿ ಎಲ್ಲವನ್ನೂ ಮೀರಿದೆ' ಎಂದು ಚೇತರಿಕೆಯ ಬಗ್ಗೆ ಹೇಳಿಕೊಂಡಿದ್ದಾರೆ.
'ಸಾಧ್ಯವಾದಷ್ಟು ಸಮಯ ದೇಶಕ್ಕಾಗಿ ಆಡಬೇಕು ಎಂಬುದೇ ನನಗೆ ಸ್ಫೂರ್ತಿ ನೀಡುವ ಸಂಗತಿ' ಎಂದಿರುವ ಅವರು, 'ದೇವರ ದಯೆಯಿಂದ ಇಂದು ಭಾರತಕ್ಕಾಗಿ ಆಡುತ್ತಿದ್ದೇನೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
2024ರ ನವೆಂಬರ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ
2023ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದ ಶಮಿ, ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದು 2024ರ ನವೆಂಬರ್‌ನಲ್ಲಿ. ರಣಜಿ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಪರ ಆಡಿದ್ದರು.
ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮೂಲಕ ಶಮಿ, ಭಾರತ ತಂಡಕ್ಕೆ ಮರಳಿದ್ದಾರೆ. ಐದು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಲಾ 2 ಪಂದ್ಯ ಆಡಿದ್ದ ಅವರು, ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದಿದ್ದರು.
ಭಾರತ ತಂಡ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಇಂದು (ಫೆ.20 ಗುರುವಾರ) ಆಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.