ADVERTISEMENT

2026ರ ಏಷ್ಯನ್ಸ್‌ ಗೇಮ್ಸ್‌: ಕ್ರಿಕೆಟ್‌ಗೆ ಮತ್ತೆ ಸ್ಥಾನ

ಪಿಟಿಐ
Published 30 ಏಪ್ರಿಲ್ 2025, 15:46 IST
Last Updated 30 ಏಪ್ರಿಲ್ 2025, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಅನ್ನು ಉಳಿಸಿಕೊಳ್ಳಲಾಗಿದೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒಸಿಎ) ಮತ್ತು ಸಂಘಟನಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸೆ.19ರಿಂದ ಅ.4ರವರೆಗೆ ಜಪಾನ್‌ನಲ್ಲಿ ಕೂಟ ನಡೆಯಲಿದೆ. ನಗೋಯಾ ಸಿಟಿ ಹಾಲ್‌ನಲ್ಲಿ ಸೋಮವಾರ ನಡೆದ ಸಂಘಟನಾ ಸಮಿತಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಕ್ರಿಕೆಟ್‌ ಮತ್ತು ಮಿಶ್ರ ಮಾರ್ಷಲ್‌ ಆರ್ಟ್ಸ್‌ ಅನ್ನು ಔಪಚಾರಿಕವಾಗಿ ಅನುಮೋದಿಸಲಾಯಿತು ಎಂದು ಒಸಿಎ ತಿಳಿಸಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ನಾಲ್ಕನೇ ಬಾರಿ ಸ್ಥಾನ ಪಡೆದಂತಾಗಿದೆ. ಈ ಮೊದಲು ಗುವಾಂಗ್‌ಝೌ (2010), ಇಂಚಿಯಾನ್ (2014) ಮತ್ತು ಹಾಂಗ್‌ಝೌ (2023) ಕೂಟಗಳಲ್ಲಿ ಕ್ರಿಕೆಟ್‌ ಸೇರಿತ್ತು. ಭಾರತ ಪುರುಷ ಮತ್ತು ಮಹಿಳಾ ತಂಡಗಳು ಹಾಲಿ ಚಾಂಪಿಯನ್‌ಗಳಾಗಿವೆ.

ADVERTISEMENT

‘ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ. ಐಚಿ ಪ್ರಾಂತ್ಯದಲ್ಲಿ ಆಯೋಜಿಸಲು ಚಿಂತಿಸಲಾಗಿದೆ. ಆದರೂ ತಾಣಗಳು ಇನ್ನೂ ಅಂತಿಮಗೊಂಡಿಲ್ಲ. ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್ ಜನಪ್ರಿಯತೆ ಹೊಂದಿದೆ ಮಾತ್ರವಲ್ಲದೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲೂ ಸೇರ್ಪಡೆಗೊಂಡಿರುವುದರಿಂದ ಈ ಕ್ರೀಡೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎಂದು ಒಸಿಎ ಪ್ರಕಟಣೆ ತಿಳಿಸಿದೆ.

1900ರಲ್ಲಿ (ಪ್ಯಾರಿಸ್‌) ಬ್ರಿಟನ್ ತಂಡವು 158 ರನ್‌ಗಳಿಂದ ಫ್ರಾನ್ಸ್ ತಂಡವನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸಿದ ನಂತರ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್‌ ಕಾಣಿಸಿಕೊಳ್ಳಲಿದೆ.

ಏಷ್ಯನ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿದಂತೆ 41 ಕ್ರೀಡೆಗಳು ಇರಲಿವೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್ ಅಧೀನದಲ್ಲಿರುವ 45 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳನ್ನು ಪ್ರತಿನಿಧಿಸುವ 15 ಸಾವಿರ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.