ADVERTISEMENT

ಹುಬ್ಬಳ್ಳಿ ಹುಡುಗರಿಗೆ ರೋಹಿತ್‌ ಶರ್ಮಾ ಪಾಠ....

​ಪ್ರಜಾವಾಣಿ ವಾರ್ತೆ
Published 4 ಮೇ 2020, 2:26 IST
Last Updated 4 ಮೇ 2020, 2:26 IST
ಭಾರತದ ಕ್ರಿಕೆಟಿಗ ರೋಹಿತ್‌ ಶರ್ಮಾ
ಭಾರತದ ಕ್ರಿಕೆಟಿಗ ರೋಹಿತ್‌ ಶರ್ಮಾ   
""

ಪ್ರತಿ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳು ಕ್ರೀಡಾ ಚಟುವಟಿಕೆಗಳಿಗೆ ಸುಗ್ಗಿಕಾಲವಿದ್ದಂತೆ. ಪರೀಕ್ಷಾ ಸಮಯ ಮುಗಿದು ಬೇಸಿಗೆ ರಜೆಯ ದಿನಗಳು ಆರಂಭವಾಗುತ್ತಿದ್ದಂತೆ ಕ್ರಿಕೆಟ್‌, ಬ್ಯಾಡ್ಮಿಂಟನ್‌, ಕರಾಟೆ, ಚೆಸ್‌, ಕಬಡ್ಡಿ ಹೀಗೆ ಹಲವಾರು ಕ್ರೀಡೆಗಳ ತರಬೇತಿ ಶಿಬಿರಗಳು ನಡೆಯುತ್ತಿದ್ದವು. ತಾಲ್ಲೂಕು, ಜಿಲ್ಲಾ ಮತ್ತು ಪ್ರಮುಖ ನಗರ ಕೇಂದ್ರಗಳಲ್ಲಿ ಮೈದಾನಗಳು ಕ್ರೀಡಾ ಚಟುವಟಿಕೆಗಳ ಕೇಂದ್ರ ಬಿಂದು ಆಗಿರುತ್ತಿದ್ದವು.

ಆದರೆ, ಈ ವರ್ಷ ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ ಕ್ರೀಡಾಪಟುಗಳನ್ನು ಮನೆಯಲ್ಲೇ ಬಂದಿ ಮಾಡಿದೆ. ಹೊಸತನಗಳಿಗೆ ಕಾರಣವೂ ಆಗಿದೆ. ಯಾವುದೇ ಕ್ರಿಕೆಟ್ ಸರಣಿ, ಟೂರ್ನಿ ಇಲ್ಲದ ಕಾರಣ ಬಹಳಷ್ಟು ಆಟಗಾರರು ಹೊಸಬರಿಗೆ ಆನ್‌ಲೈನ್‌ ಮೂಲಕ ಆಟದ ಕೌಶಲ, ಫಿಟ್‌ನೆಸ್‌ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.

ಭಾರತದ ಕ್ರಿಕೆಟಿಗ ರೋಹಿತ್‌ ಶರ್ಮಾ ಅವರ ‘ಕ್ರಿಕ್‌ ಕಿಂಗ್‌ಡಮ್‌’ ಸಹಯೋಗದಲ್ಲಿ ಹುಬ್ಬಳ್ಳಿಯಲ್ಲಿ ಎಂಟು ತಿಂಗಳ ಹಿಂದೆ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಆರಂಭವಾಗಿದೆ. ಹುಬ್ಬಳ್ಳಿಯ ಯುವ ಕ್ರಿಕೆಟಿಗರಿಗೆ ರೋಹಿತ್‌ ಮತ್ತು ಧವಳ್ ಕುಲಕರ್ಣಿ ಆನ್‌ಲೈನ್‌ ಮೂಲಕ ಹೊಸ ವಿಷಯಗಳನ್ನು ಕಲಿಸಿಕೊಡುತ್ತಿದ್ದಾರೆ. ಸ್ಕಾಟ್ಲೆಂಡ್‌ ಕ್ರಿಕೆಟ್ ತಂಡದ ನಾಯಕ ಕೇಲ್‌ ಸಿಟ್ಜರ್‌ ಕೂಡ ಮಾರ್ಗದರ್ಶನ ಮಾಡುತ್ತಿದ್ದಾರೆ.

ADVERTISEMENT

ಮನೆಯಲ್ಲಿ ಹ್ಯಾಂಗಿಂಗ್‌ ಚೆಂಡು ಕಟ್ಟಿ ಬ್ಯಾಟಿಂಗ್‌ ಅಭ್ಯಾಸ ಮಾಡುವುದು, ಮನೆಯ ಅಂಗಳದಲ್ಲಿ ಫೀಲ್ಡಿಂಗ್‌ ಅಭ್ಯಾಸ, ಗೋಡೆಗೆ ಚೆಂಡು ಎಸೆದು ಹಿಡಿಯುವುದು ಹೀಗೆ ವಿವಿಧ ಕೌಶಲಗಳನ್ನು ಹೇಳಿಕೊಡುತ್ತಿದ್ದಾರೆ. ಒಂದು ಓವರ್‌ನಲ್ಲಿ ಎರಡು ಎಸೆತಗಳನ್ನು ಸ್ವೀಪ್‌ ಶಾಟ್‌, ಸ್ಕ್ವೇರ್‌ ಕಟ್ ಹೊಡೆಯಬೇಕು. ಉಳಿದ ಎಸೆತಗಳನ್ನು ರಕ್ಷಣಾತ್ಮಕವಾಗಿ ಹೇಗೆ ಆಡಬೇಕು ಎನ್ನುವುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ವಿವಿಧ ರಾಷ್ಟ್ರಗಳಲ್ಲಿ ನಡೆಯುವ ಕ್ರಿಕೆಟ್‌ ಶಿಬಿರಗಳ ವೇಳಾಪಟ್ಟಿ ಅಧ್ಯಯನ ಮಾಡಿರುವ ರೋಹಿತ್‌ ಶರ್ಮಾ ತಮ್ಮ ಅಧೀನದ ಕ್ರಿಕೆಟ್‌ ಕ್ಲಬ್‌ಗಳಲ್ಲಿ ತರಬೇತಿ ಪಡೆಯುವ ಮಕ್ಕಳಿಗೆ ಪಠ್ಯ ಸಿದ್ಧಪಡಿಸಿದ್ದಾರೆ. ಪಠ್ಯ ಆಧರಿಸಿ ರೂಪಿಸಿರುವ ವೇಳಾಪಟ್ಟಿಯನ್ನು ಅಕಾಡೆಮಿಯ ಮಕ್ಕಳಿಗೆ ನೀಡಲಾಗಿದೆ.

ರೋಹಿತ್‌ ಶರ್ಮಾ ರೂಪಿಸಿದ ಪಠ್ಯದ ಪ್ರಕಾರ ಫಿಟ್‌ನೆಸ್‌ ತರಬೇತಿ ನಡೆಸಿದ ಹುಬ್ಬಳ್ಳಿಯ ದುರ್ಗಾ ಸ್ಪೋರ್ಟ್ಸ್‌ ಅಕಾಡೆಮಿಯ ಕ್ರಿಕೆಟಿಗರು

ದುರ್ಗಾ ಅಕಾಡೆಮಿಯಲ್ಲಿ ಮಾಜಿ ಕ್ರಿಕೆಟಿಗ ಪ್ರಮೋದ್‌ ಕಾಮತ್‌, ನಿಲೇಶ ಖಿಲಾರೆ, ಪ್ರಥಮೇಶ ಸೋಳುಂಕೆ, ಮಹೇಶ ಜವಳಿ ಮತ್ತು ಮಂಜುನಾಥ ಮುಗಬಸ್ತ್‌ ತರಬೇತುದಾರರಾಗಿದ್ದಾರೆ. ಅಕಾಡೆಮಿಯ ಮಕ್ಕಳು ಆನ್‌ಲೈನ್‌ ಕೋಚಿಂಗ್‌ ಮೂಲಕ ತಿಳಿದುಕೊಂಡು ಅಭ್ಯಾಸ ಮಾಡಿ ಆ ವಿಡಿಯೊಗಳನ್ನು ತಮ್ಮ ಅಕಾಡೆಮಿಯ ಕೋಚ್‌ಗಳಿಗೆ ಕಳುಹಿಸುತ್ತಾರೆ. ಅವರು ಮಕ್ಕಳ ಸರಿ, ತಪ್ಪುಗಳನ್ನು ಪರಿಶೀಲಿಸುತ್ತಾರೆ.

ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ರೋಹಿತ್‌ ಶರ್ಮಾ ಫಿಟ್‌ನೆಸ್‌, ಉತ್ತಮ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಅಭ್ಯಾಸ ಮಾಡಿ ವಿಡಿಯೊ ಕಳುಹಿಸಿದ ಮಕ್ಕಳಿಗೆ ವಿಶೇಷ ಗೌರವ ನೀಡಿ ವಿಜೇತರನ್ನು ಘೋಷಿಸುತ್ತಾರೆ. ದುರ್ಗಾ ಅಕಾಡೆಮಿಯ ವಿದ್ಯಾರ್ಥಿ ಆರು ವರ್ಷದ ಅಥರ್ವ ಹೊಂಗಲ್‌ ಇತ್ತೀಚಿಗೆ ಈ ಗೌರವಕ್ಕೆ ಪಾತ್ರನಾಗಿದ್ದ.

‘ಆನ್‌ಲೈನ್‌ ಮೂಲಕವೇ ತರಬೇತಿ ಪಡೆಯುತ್ತಿರುವುದರಿಂದ ಅನುಕೂಲವಾಗುತ್ತಿದೆ. ನಿತ್ಯ ಫೀಲ್ಡಿಂಗ್‌ ಮತ್ತು ಚೆಂಡು ಕ್ಯಾಚ್‌ ಪಡೆಯುವ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ದುರ್ಗಾ ಅಕಾಡೆಮಿಯ 14 ವರ್ಷದ ಆಟಗಾರ್ತಿ ರಿಯಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.