ADVERTISEMENT

ಮ್ಯಾಚ್‌ ಫಿಕ್ಸಿಂಗ್ ಗಂಭೀರ ಅಪರಾಧವೆಂದು ಪರಿಗಣಿಸಲು ಸಲಹೆ

ಪಿಟಿಐ
Published 25 ಜೂನ್ 2020, 16:44 IST
Last Updated 25 ಜೂನ್ 2020, 16:44 IST
ಐಸಿಸಿ
ಐಸಿಸಿ   

ನವದೆಹಲಿ: ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕಲು ಭಾರತದಲ್ಲಿ ಪೊಲೀಸರಿಗೆ ಮ್ಯಾಚ್‌ ಫಿಕ್ಸಿಂಗ್ ಪ್ರಕರಣಗಳನ್ನು ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡುವುದೊಂದೇ ಏಕಮಾತ್ರ ದಾರಿ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಸಂಯೋಜಕ ಸ್ಟೀವ್ ರಿಚರ್ಡ್ಸನ್ ಹೇಳಿದ್ಧಾರೆ.

‘ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳನ್ನು ಗಂಭೀರ ಅಪರಾಧಗಳೆಂದು ಪರಿಗಣಿಸಬೇಕು. ಅವುಗಳನ್ನು ಕಾನೂನಿನಡಿಯಲ್ಲಿ ತರಬೇಕು. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಕಾನೂನು ತಜ್ಞರು ಹಲವು ವರ್ಷಗಳಿಂದ ಹೇಳುತ್ತಿದ್ಧಾರೆ. ಆದರೆ, ಈ ವಿಷಯದಲ್ಲಿ ಭಾರತದಲ್ಲಿ ಪೊಲೀಸರಿಗೆ ಕಾನೂನೂತ್ಮಕಾ ಅಧಿಕಾರಿಗಳು ಇಲ್ಲ. ಅವರ ಕೈಕಟ್ಟಿಹಾಕಲಾಗಿದೆ’ ಎಂದು ಇಎಸ್‌ಬಿಎನ್‌ ಕ್ರಿಕ್‌ಇನ್ಫೋ ಸಂವಾದದಲ್ಲಿ ತಿಳಿಸಿದ್ದಾರೆ.

‘ನಾವು ಈಗ 50 ಪ್ರಕರಣಗಳ ತನಿಖೆ ನಡೆಸುತ್ತಿದ್ದೇವೆ. ಅದರಲ್ಲಿರುವ ಹಲವು ಆರೋಪಿಗಳು ಒಂದಿಲ್ಲೊಂದು ರೀತಿಯಲ್ಲಿ ಭಾರತದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಒಂದೊಮ್ಮೆ ಭಾರತದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಕ್ರೀಡೆಯ ದೊಡ್ಡ ಬದಲಾವಣೆಗೆ ಕಾರಣವಾಗುವುದು ಖಚಿತ’ ಎಂದರು.

ADVERTISEMENT

‘ಮುಂದಿನ ವರ್ಷ ಟಿ20 ವಿಶ್ವಕಪ್, 2023ರಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲಿದೆ. ಅದರೊಂದಿಗೆ ಮಹತ್ವದ ಸರಣಿಗಳಿಗೂ ಆತಿಥ್ಯ ವಹಿಸಲಿದೆ. ಆದ್ದರಿಂದ ಈಗಲೇ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗುವುದು ಒಳಿತು’ ಎಂದು ಸಲಹೆ ನೀಡಿದರು.

‘ನಾನು ಈಗಲೇ ಭಾರತದ ಸರ್ಕಾರ ಅಥವಾ ಪೊಲೀಸ್ ಇಲಾಖೆಗೆ ಕನಿಷ್ಠ ಎಂಟು ಜನ ದೊಡ್ಡ ಆರೋಪಿಗಳ ಮಾಹಿತಿಯನ್ನು ಕೊಡಬಹುದು. ಅವರು ನಿರಂತರವಾಗಿ ಆಟಗಾರರನ್ನು ಭೇಟಿಯಾಗಿ ಪಂದ್ಯಗಳನ್ನು ಫಿಕ್ಸ್ ಮಾಡಲು ಯತ್ನಿಸುವವರಾಗಿದ್ದಾರೆ. ಆದರೆ ಸದ್ಯ ಇರುವ ಕಾನೂನು ಕ್ರೀಡಾ ಅಪರಾಧಗಳ ಕುರಿತು ವ್ಯಾಖ್ಯಾನ ನೀಡುವುದಿಲ್ಲ. ಆದ್ದರಿಂದ ಭಾರತದಲ್ಲಿ ಮ್ಯಾಚ್‌ ಫಿಕ್ಸಿಂಗ್ ಕಾನೂನು ಜಾರಿಯಾಗುವುದು ತುರ್ತು ಅಗತ್ಯವಾಗಿದೆ’ ಎಂದು ರಿಚರ್ಡ್ಸನ್ ಹೇಳಿದ್ದಾರೆ.

‘ಭಾರತದಲ್ಲಿ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ತಡೆಗೆ ಸೂಕ್ತ ಕಾನೂನುಗಳಿಲ್ಲ’ ಎಂದು ಈಚೆಗೆ ಬಿಸಿಸಿಐ ಎಸಿಯುನ ಮುಖ್ಯಸ್ಥ ಅಜಿತ್ ಸಿಂಗ್ ಕೂಡ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.