ADVERTISEMENT

ಧೋನಿ–ರೋಹಿತ್ ಮುಖಾಮುಖಿ

ಇಂದು ಮೊದಲ ಕ್ವಾಲಿಫೈಯರ್ ಪಂದ್ಯ: ಗೆದ್ದರೆ ಫೈನಲ್‌ಗೆ; ಸೋತ ತಂಡಕ್ಕೆ ಮತ್ತೊಂದು ಅವಕಾಶ

​ಪ್ರಜಾವಾಣಿ ವಾರ್ತೆ
Published 6 ಮೇ 2019, 20:07 IST
Last Updated 6 ಮೇ 2019, 20:07 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಚೆನ್ನೈ : ತಂತ್ರಗಾರಿಕೆಗೆ ಹೆಸರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ಬ್ಯಾಟಿಂಗ್ ಪ್ರವೀಣ ರೋಹಿತ್ ಶರ್ಮಾ ನಡುವಿನ ಕದನಕ್ಕೆ ಚೆಪಾಕ್ ಸಜ್ಜಾಗಿದೆ.

ಮಂಗಳವಾರ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಲಿವೆ.

ಕೊನೆಯ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಎದುರು ಆರು ವಿಕೆಟ್‌ಗಳಿಂದ ಸೋತಿರುವ ಸೂಪರ್ ಕಿಂಗ್ಸ್‌ ನಿರಾಸೆ ಅನುಭವಿಸಿತ್ತು. ಈ ನಿರಾಸೆ ಮರೆತು ತವರಿನ ಪ್ರೇಕ್ಷಕರ ಮುಂದೆ ಗೆಲ್ಲುವ ಇರಾದೆಯೊಂದಿಗೆ ಆತಿಥೇಯರು ಕಣಕ್ಕೆ ಇಳಿಯಲಿದ್ದಾರೆ.

ADVERTISEMENT

ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತವರಿಗೆ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ಜೊತೆ ಆಡಲು ಮತ್ತೊಂದು ಅವಕಾಶವಿದೆ. ಸಿಎಸ್‌ಕೆ ಮತ್ತು ಮುಂಬೈ ತಂಡಗಳು ಈ ಹಿಂದೆ ತಲಾ ಮೂರು ಬಾರಿ ಪ್ರಶಸ್ತಿ ಗೆದ್ದಿವೆ. ಈ ಬಾರಿ ಲೀಗ್‌ ಹಂತದಲ್ಲಿ ಅಮೋಘ ಸಾಧನೆ ಮಾಡಿವೆ. ಆದ್ದರಿಂದ ಯಾರ ಕೈ ಮೇಲು ಎಂದು ಹೇಳುವುದು ಕ್ರಿಕೆಟ್ ಪಂಡಿತರಿಗೂ ಸವಾಲಿನ ವಿಷಯವಾಗಿದೆ.

ಲೀಗ್ ಹಂತದಲ್ಲಿ ತವರಿನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿರುವ ಸೂಪರ್ ಕಿಂಗ್ಸ್‌ ಮತ್ತೊಂದು ಗೆಲುವಿಗೆ ತವಕಿಸುತ್ತಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್‌ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿದೆ. ಹೀಗಾಗಿ ರೋಹಿತ್ ಬಳಗವೂ ವಿಶ್ವಾಸದಲ್ಲಿದೆ.

ಅಗ್ರ ಕ್ರಮಾಂಕ–ಬೌಲರ್‌ಗಳ ಜಿದ್ದಾಜಿದ್ದಿ: ಆರಂಭದ ಪಂದ್ಯಗಳಲ್ಲಿ ಸೂಪರ್ ಕಿಂಗ್ಸ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಈಗ ಮುಂಬೈನ ಬಲಿಷ್ಠ ಬೌಲಿಂಗ್ ವಿಭಾಗದ ದಾಳಿಯನ್ನು ಮೆಟ್ಟಿನಿಲ್ಲ ಬೇಕಾದ ಸವಾಲು ಅವರ ಮೇಲಿದೆ.

ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ, ಹಾರ್ದಿಕ್ ಪಾಂಡ್ಯ, ಆಫ್ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ, ಲೆಗ್ ಸ್ಪಿನ್ನರ್‌ ರಾಹುಲ್ ಚಾಹರ್ ಮುಂಬೈ ತಂಡದ ಬೌಲಿಂಗ್‌ ವಿಭಾಗದ ಶಕ್ತಿ.

ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್‌ಗೆ ನಾಯಕ ಧೋನಿ ಬೆನ್ನೆಲುಬು. 12 ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ ಅವರು ಒಟ್ಟು 368 ರನ್‌ಗಳನ್ನು ಕಲೆ ಹಾಕಿದ್ದಾರೆ. ಆರಂಭಿಕ ಜೋಡಿ ಶೇನ್ ವ್ಯಾಟ್ಸನ್ ಮತ್ತು ಫಾಫ್ ಡು ಪ್ಲೆಸಿ ಅವರೊಂದಿಗೆ ಮಧ್ಯಮ ಕ್ರಮಾಂಕದ ಸುರೇಶ್‌ ರೈನಾ ಮತ್ತು ಅಂಬಟಿ ರಾಯುಡು ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ.

ಗಾಯಗೊಂಡಿರುವ ಕೇದಾರ್ ಜಾಧವ್ ಅವರು ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ. ಅವರ ಬದಲಿಗೆ ಮುರಳಿ ವಿಜಯ್ ಅಥವಾ ಧ್ರುವ ಶೋರೆಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಆರಂಭದಿಂದಲೇ ಸೂಪರ್ ಕಿಂಗ್ಸ್‌ನ ಬೌಲರ್‌ಗಳು ಮಿಂಚಿನ ದಾಳಿ ನಡೆಸಿದ್ದಾರೆ. ಸ್ಪಿನ್ನರ್‌ಗಳಾ ಇಮ್ರಾನ್ ತಾಹೀರ್‌, ಹರಭಜನ್ ಸಿಂಗ್, ರವೀಂದ್ರ ಜಡೇಜ, ಮಧ್ಯಮ ವೇಗಿಗಳಾದ ದೀಪಕ್ ಚಾಹರ್ ಮತ್ತು ಡ್ರೇನ್ ಬ್ರಾವೊ ಮುಂತಾದವರು ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್‌ ಅವರನ್ನು ಕಟ್ಟಿ ಹಾಕಲು ಯಶಸ್ವಿಯಾಗುವರೇ ಎಂಬ ಪ್ರಶ್ನೆ ಕ್ರಿಕೆಟ್ ಪ್ರಿಯರನ್ನು ಕಾಡುತ್ತಿದೆ.

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್‌: ಮಹೇಂದ್ರ ಸಿಂಗ್ ಧೋನಿ (ನಾಯಕ/ವಿಕೆಟ್ ಕೀಪರ್‌), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವ್ಯಾಟ್ಸನ್‌, ಫಾಫ ಡು ಪ್ಲೆಸಿ, ಮುರಳಿ ವಿಜಯ್‌, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ನಿಷ್ನೋಯ್‌, ಋತುರಾಜ್‌ ಗಾಯಕವಾಡ್‌, ಡ್ವೇನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹೀರ್‌, ಹರಭಜನ್ ಸಿಂಗ್‌, ಮಿಷೆಲ್ ಸ್ಯಾಂಟನರ್, ಶಾರ್ದೂಲ್ ಠಾಕೂರ್‌, ಮೋಹಿತ್ ಶರ್ಮಾ, ಕೆ.ಎಂ. ಆಸಿಫ್‌, ದೀಪಕ್ ಚಾಹರ್‌, ಜಗದೀಶನ್‌, ಸ್ಕಾಟ್‌ ಕುಗೆಲಿನ್.

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್‌ (ವಿಕೆಟ್ ಕೀಪರ್‌), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್‌, ಕೀರನ್ ಪೊಲಾರ್ಡ್‌, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಮಿಷೆಲ್‌ ಮೆಕ್‌ಲೆನಾಗನ್‌, ಮಯಂಕ್ ಮಾರ್ಕಂಡೆ, ರಾಹುಲ್ ಚಾಹರ್‌, ಜಸ್‌ಪ್ರೀತ್ ಬೂಮ್ರಾ, ಅನ್ಮೋಲ್ ಪ್ರೀತ್ ಸಿಂಗ್‌, ಸಿದ್ದೇಶ್ ಲಾಡ್‌, ಅನುಕೂಲ್ ರಾಯ್‌, ಎವಿನ್ ಲ್ಯೂವಿಸ್‌, ಪಂಕಜ್ ಜೈಸ್ವಾಲ್‌, ಬೆನ್ ಕಟಿಂಗ್‌, ಇಶಾನ್ ಕಿಶನ್, ಆದಿತ್ಯ ತಾರೆ, ರಸಿಕ್ ಸಲಾಂ, ಬರಿಂದರ್ ಸ್ರಾನ್‌, ಜಯಂತ್ ಯಾದವ್, ಬ್ಯೂರನ್ ಹೆನ್ರಿಕ್ಸ್‌, ಲಸಿತ್ ಮಾಲಿಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.