ADVERTISEMENT

ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ: ಹೈಬ್ರಿಡ್ ಮಾದರಿ ಅಂತಿಮ

2027ರವರೆಗೆ ಇದೇ ಏರ್ಪಾಡಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 4:05 IST
Last Updated 6 ಡಿಸೆಂಬರ್ 2024, 4:05 IST
<div class="paragraphs"><p>ಐಸಿಸಿ</p></div>

ಐಸಿಸಿ

   

ನವದೆಹಲಿ: ಮುಂದಿನ ವರ್ಷದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸುವುದಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡಿಸುವಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಯಶಸ್ವಿಯಾಗಿದೆ. ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

2027ರವರೆಗೆ ನಡೆಯುವ ಐಸಿಸಿ ಟೂರ್ನಿಗಳಲ್ಲಿ ಇಂಥದ್ದೇ ಏರ್ಪಾಡನ್ನು ಮುಂದುವರಿಸಲು  ಐಸಿಸಿ ‘ತಾತ್ವಿಕ’ವಾಗಿ ಒಪ್ಪಿಗೆಯನ್ನೂ ನೀಡಿದೆ.

ADVERTISEMENT

ಐಸಿಸಿಯ ಹೊಸ ಅಧ್ಯಕ್ಷ ಜಯ್‌ ಶಾ ಮತ್ತು ಪಾಕಿಸ್ತಾನವೂ ಒಳಗೊಂಡಂತೆ ಮಂಡಳಿಯ ನಿರ್ದೇಶಕರ ಜೊತೆಗೆ ದುಬೈನಲ್ಲಿರುವ ಸಮಿತಿಯ ಕೇಂದ್ರ ಕಚೇರಿಯಲ್ಲಿ ಗುರುವಾರ ಅನೌಪಚಾರಿಕ ಸಭೆ ನಡೆದಿದ್ದು,  ಈ ನಿರ್ಧಾರವನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ಸಮಿತಿಯ ಮೂಲವೊಂದು ತಿಳಿಸಿದೆ.

‘2025ರ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯಗಳನ್ನು ಯುಎಇ ಮತ್ತು ಪಾಕಿಸ್ತಾನದಲ್ಲಿ ನಡೆಸಲು ಎಲ್ಲ ಭಾಗೀದಾರರು ಒಪ್ಪಿಗೆ ನೀಡಿದ್ದಾರೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಸಭೆಯಲ್ಲಿ ಎಲ್ಲ ಭಾಗೀದಾರರಿಗೂ ಸಮಾಧಾನವಾಗಿದೆ’ ಎಂದು ಈ ಮೂಲ ಪಿಟಿಐಗೆ ತಿಳಿಸಿವೆ.

ಚಾಂಪಿಯನ್ಸ್‌ ಟ್ರೋಫಿ ಮುಂದಿನ ವರ್ಷದ ಫೆಬ್ರುವರಿ– ಮಾರ್ಚ್‌ ತಿಂಗಳಲ್ಲಿ ನಡೆಯಲಿದೆ.

ಬಹಿಷ್ಕಾರ ಬೆದರಿಕೆಯಿಂದ ಹಿಂದೆ ಸರಿದು, ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ನಡೆಸುವುದಕ್ಕೆ ಕಳೆದ ವಾರ ನಡೆದ ಐಸಿಸಿ ಸಭೆಯಲ್ಲಿ ಪಾಕಿಸ್ತಾನ ಒಪ್ಪಿಕೊಂಡಿತ್ತು. ಆದರೆ 2031ರವರೆಗೆ ಇಂಥದ್ದೇ ಏರ್ಪಾಡನ್ನು ತನಗೂ ಮಾಡಬೇಕು ಎಂದು ಹಟ ಹಿಡಿದಿತ್ತು.

2027ರವರೆಗಿನ ಅವಧಿಯಲ್ಲಿ ಭಾರತವು ಒಂದು ಐಸಿಸಿ ಟೂರ್ನಿಯ ಆತಿಥ್ಯ ಮತ್ತು ಒಂಟು ಟೂರ್ನಿಯ ಜಂಟಿ ಆತಿಥ್ಯ ವಹಿಸಿದೆ. 2025ರ ಅಕ್ಟೋಬರ್‌ನಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಭಾರತದಲ್ಲಿ ನಿಗದಿಯಾಗಿದೆ. 2026ರಲ್ಲಿ ಪುರುಷರ ಟಿ20 ವಿಶ್ವಕಪ್‌ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಚಾಂಪಿಯನ್ಸ್‌ ಟ್ರೋಫಿ ಹೈಬ್ರಿಡ್‌ ಮಾದರಿ ಒಪ್ಪಿಕೊಂಡಿದ್ದಕ್ಕೆ ಪಾಕಿಸ್ತಾನ ಕೇಳಿರುವ ಪರಿಹಾರಕ್ಕೆ ಸಂಬಂಧಿಸಿದ ನಿರ್ಧಾರ ಪರಿಶೀಲನೆಯಲ್ಲಿದೆ ಎಂದು ಮೂಲ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.