
ದೀಪ್ತಿ ಶರ್ಮಾ
ಪಿಟಿಐ
ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ತವರಿನಲ್ಲಿ ನಡೆದ ಸರಣಿಯಲ್ಲಿ ಪ್ರೇರಣಾದಾಯಿ ಪ್ರದರ್ಶನ ನೀಡಿದ ಭಾರತದ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ.
27 ವರ್ಷ ವಯಸ್ಸಿನ ದೀಪ್ತಿ 665 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದು ಐದನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಮರೈಜಾನ್ ಕಾಪ್ (677 ರೇಟಿಂಗ್ ಪಾಯಿಂಟ್ಸ್) ನಾಲ್ಕನೇ ಸ್ಥಾನದಲ್ಲಿದ್ದಾರೆ.
ದೀಪ್ತಿ ಎರಡು ಪಂದ್ಯಗಳಿಂದ ಎಂಟು ವಿಕೆಟ್ ಕಬಳಿಸಿದ್ದರು. ಕೊನೆಯ ಪಂದ್ಯದಲ್ಲಿ 31 ರನ್ನಿಗೆ 6 ವಿಕೆಟ್ ಪಡೆದಿದ್ದರು. ಔಟಾಗದೇ 39 ರನ್ ಗಳಿಸಿ ಗೆಲುವಿನಲ್ಲಿ ಮಿಂಚಿದ್ದರು. ಭಾರತ ಸರಣಿಯನ್ನು 3–0 ಯಿಂದ ಗೆದ್ದುಕೊಂಡಿತ್ತು.
ಬ್ಯಾಟರ್‌ಗಳ ಪೈಕಿ ಜೆಮಿಮಾ ರಾಡ್ರಿಗಸ್ ನಾಲ್ಕು ಸ್ಥಾನ ಪ್ರಗತಿ ಕಂಡಿದ್ದು 22ನೇ ಸ್ಥಾನದಲ್ಲಿದ್ದಾರೆ. ಅವರು ಇತ್ತೀಚಿನ ಸರಣಿಯಲ್ಲಿ 29 ಮತ್ತು 52 ರನ್ ಗಳಿಸಿದ್ದರು.
ಭಾರತದ ಸ್ಮೃತಿ ಮಂದಾನ (720 ರೇಟಿಂಗ್ ಪಾಯಿಂಟ್ಸ್) ಒಂದು ಸ್ಥಾನ ಕೆಳಗಿಳಿದು ಮೂರನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಟ್ (773) ಮತ್ತು ಶ್ರೀಲಂಕಾದ ಚಮಾರಿ ಅಟ್ಟಪಟ್ಟು (733) ಮೊದಲ ಎರಡು ಸ್ಥಾನಗಳನ್ನು ಗಳಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ 13ನೇ ಸ್ಥಾನದಲ್ಲಿದ್ದಾರೆ.
ಭಾರತ ವಿರುದ್ಧ ಸರಣಿಯ ಎರಡನೇ ಪಂದ್ಯದಲ್ಲಿ ಮಿಂಚಿನ ಶತಕ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಹೇಯಲಿ ಮ್ಯಾಥ್ಯೂಸ್ ಆರು ಸ್ಥಾನ ಮೇಲೇರಿ ಏಳನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.