ADVERTISEMENT

ಡೆಲ್ಲಿ ಜಯಭೇರಿ; ಚೆನ್ನೈಗೆ ನಿರಾಸೆ

ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶಿಖರ್ ಧವನ್

ಪಿಟಿಐ
Published 18 ಅಕ್ಟೋಬರ್ 2020, 1:30 IST
Last Updated 18 ಅಕ್ಟೋಬರ್ 2020, 1:30 IST
ಫಾಫ್ ಡುಪ್ಲೆಸಿ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ
ಫಾಫ್ ಡುಪ್ಲೆಸಿ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ   
""

ಶಾರ್ಜಾ: ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಶಿಖರ್ ಧವನ್ (ಔಟಾಗದೆ 101; 58 ಎಸೆತ, 1 ಸಿಕ್ಸರ್‌, 14 ಬೌಂಡರಿ) ಅವರ ಆಸೆ ಶನಿವಾರ ರಾತ್ರಿ ಇಲ್ಲಿ ಕೈಗೂಡಿತು. ಅವರ ಅಮೋಘ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಗಳಿಸಿತು.

180 ರನ್‌ಗಳ ಜಯದ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಖಾತೆ ತೆರೆಯುವ ಮೊದಲೇ ಪೃಥ್ವಿ ಶಾ ಅವರನ್ನು ಕಳೆದು ಕೊಂಡಿತು. ಮೊತ್ತ 26 ಆಗುವಷ್ಟರಲ್ಲಿ ಅಜಿಂಕ್ಯ ರಹಾನೆ ಅವರೂ ಮರಳಿದರು.

ಶಿಖರ್‌ ಧವನ್ ಅವರ ಜೊತೆ ಗೂಡಿದ ನಾಯಕ ಶ್ರೇಯಸ್ ಅಯ್ಯರ್ ಮೊತ್ತವನ್ನು ಮೂರಂಕಿ ಸನಿಹ ತಲುಪಿಸಿದರು. ಅಯ್ಯರ್ ಔಟಾದ ನಂತರ ಮಾರ್ಕಸ್ ಸ್ಟೋಯಿನಿಸ್ ಮತ್ತು ಅಕ್ಷರ್ ಪಟೇಲ್ ಅವರ ಜೊತೆಗೂಡಿ ಶಿಖರ್ ತಂಡವನ್ನು ಜಯದತ್ತ ಕೊಂಡೊಯ್ದರು. ಐದು ಎಸೆತಗಳಲ್ಲಿ 21 ರನ್ ಗಳಿಸಿದ ಅಕ್ಷರ್ ಪಟೇಲ್ ಅವರು ರವೀಂದ್ರ ಜಡೇಜ ಅವರ ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದರು.

ADVERTISEMENT

ಫಾಫ್ ಡುಪ್ಲೆಸಿ, ಜಡೇಜ ಮಿಂಚು: ಟಾಸ್ ಗೆದ್ದ ಚೆನ್ನೈ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಫಾಫ್ ಡುಪ್ಲೆಸಿ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜ ಅವರ ಮಿಂಚಿನ ಬ್ಯಾಟಿಂಗ್‌ ಬಲದಿಂದ ತಂಡ ನಾಲ್ಕು ವಿಕೆಟ್‌ಗಳಿಗೆ 179 ರನ್‌ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು (ಔಟಾಗದೆ 45; 25ಎ, 1ಬೌಂ, 4ಸಿ) ಮತ್ತು ಶೇನ್ ವಾಟ್ಸನ್(36; 28ಎ, 6ಬೌಂ) ಮಹತ್ವದ ಕಾಣಿಕೆ ನೀಡಿದರು.

ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಸ್ಯಾಮ್‌ ಕರನ್ ಔಟಾದರು. ಆಗ ಜೊತೆಗೂಡಿದ ಫಾಫ್ ಡುಪ್ಲೆಸಿ ಮತ್ತು ಶೇನ್ ವಾಟ್ಸನ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 86 ರನ್‌ ಸೇರಿಸಿದರು. ವಾಟ್ಸನ್ ಔಟಾದ ನಂತರ ರಾಯುಡು ಬೌಲರ್‌ಗಳ ಬೆವರಿಳಿಸಿದರು. 15ನೇ ಓವರ್‌ನಲ್ಲಿ ಡುಪ್ಲೆಸಿ (58; 47ಎ, 6ಬೌಂ, 2ಸಿ) ಔಟಾದಾಗ ತಂಡದ ಮೊತ್ತ ನೂರರ ಗಡಿ ದಾಟಿತ್ತು. ಕೊನೆಯಲ್ಲಿ ನಾಲ್ಕು ಸಿಕ್ಸರ್‌ ಸಿಡಿಸಿದ ಜಡೇಜ ಅಬ್ಬರಿಸಿದರು. ರಾಯುಡು ಮತ್ತು ಜಡೇಜ ಮುರಿಯದ ಐದನೇ ವಿಕೆಟ್‌ಗೆ 21 ಎಸೆತಗಳಲ್ಲಿ 50 ರನ್‌ ಸೇರಿಸಿದರು. ಅದರಲ್ಲಿ ಅಂಬಟಿ ಪಾಲು 17 ರನ್ ಮಾತ್ರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.