ADVERTISEMENT

ಡಬ್ಲ್ಯುಪಿಎಲ್‌: ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಜೈಂಟ್ಸ್‌

ಪಿಟಿಐ
Published 16 ಮಾರ್ಚ್ 2023, 20:40 IST
Last Updated 16 ಮಾರ್ಚ್ 2023, 20:40 IST
ಗುಜರಾತ್ ಜೈಂಟ್ಸ್ ತಂಡದ ಲಾರಾ ವೊಲ್ವಾರ್ಡ್ ಬ್ಯಾಟಿಂಗ್ –ಪಿಟಿಐ ಚಿತ್ರ
ಗುಜರಾತ್ ಜೈಂಟ್ಸ್ ತಂಡದ ಲಾರಾ ವೊಲ್ವಾರ್ಡ್ ಬ್ಯಾಟಿಂಗ್ –ಪಿಟಿಐ ಚಿತ್ರ   

ಮುಂಬೈ: ಚೆಂದದ ಅರ್ಧಶತಕ ಗಳಿಸಿದ ಲಾರಾ ವೊಲ್ವಾರ್ಡ್ ಹಾಗೂ ಆ್ಯಷ್ಲೆ ಗಾರ್ಡನರ್ ಅವರ ಆಟದಿಂದ ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಎರಡನೇ ಗೆಲುವು ಸಾಧಿಸಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜೈಂಟ್ಸ್‌ ತಂಡ 11 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಜೈಂಟ್ಸ್‌ 20 ಓವರ್‌ಗಳಲ್ಲಿ 4 ವಿಕಟ್‌ಗಳಿಗೆ 147 ರನ್ ಗಳಿಸಿತು. ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕ್ಯಾಪಿಟಲ್ಸ್‌ 18.4 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟಾಯಿತು.

ADVERTISEMENT

ತಲಾ ಎರಡು ವಿಕೆಟ್‌ ಪಡೆದ ಕಿಮ್‌ ಗಾರ್ತ್‌, ತನುಜಾ ಕನ್ವರ್‌ ಮತ್ತು ಆ್ಯಷ್ಲೆ ಗಾರ್ಡನರ್ ಅವರು ಡೆಲ್ಲಿ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಆ್ಯಷ್ಲೆ ಆಲ್‌ರೌಂಡ್‌ ಪ್ರದರ್ಶನ ನೀಡಿದರು. ಮೆರಿಜಾನೆ ಕಾಪ್‌ (36 ರನ್‌) ಮಾತ್ರ ಅಲ್ಪ ಪ್ರತಿರೋಧ ಒಡ್ಡಿದರು. ಉಳಿದವರು ವಿಫಲರಾದರು.

ಲೀಗ್‌ನ ಮೊದಲ ಸುತ್ತಿನಲ್ಲಿ ಜೈಂಟ್ಸ್‌ ತಂಡ ಡೆಲ್ಲಿ ಎದುರು 10 ವಿಕೆಟ್‌ಗಳಿಂದ ಮಣಿದಿತ್ತು. ಆ ಸೋಲಿಗೆ ಇದೀಗ ಮುಯ್ಯಿ ತೀರಿಸಿಕೊಂಡಿದೆ.

ಲಾರಾ– ಗಾರ್ಡನರ್‌ ಆಸರೆ: ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಗುಜರಾತ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ ಲಾರಾ (57; 45ಎ, 4X6, 6X1) ಹಾಗೂ ಗಾರ್ಡನರ್ (ಔಟಾಗದೆ 51; 33ಎ, 4X9) ಮೂರನೇ ವಿಕೆಟ್ ಜೊತೆಯಾಟದಲ್ಲಿ 81 ರನ್‌ ಸೇರಿಸಿದರು.

ಮೆರಿಜಾನೆ ಕ್ಯಾಪ್ ಅವರು ಮೊದಲ ಓವರ್‌ನಲ್ಲಿಯೇ ನಾಲ್ಕು ರನ್ ಗಳಿಸಿದ್ದ ಡಂಕ್ಲಿ ಅವರ ವಿಕೆಟ್ ಗಳಿಸಿದರು. ಇನ್ನೊಂದೆಡೆ ಕ್ರೀಸ್‌ನಲ್ಲಿದ್ದ ಲಾರಾ ಅವರು ಹರ್ಲಿನ್ ಡಿಯೊಲ್ (31; 33ಎ, 4X4) ಜೊತೆಗೆ ಇನಿಂಗ್ಸ್‌ಗೆ ಚೇತರಿಕೆ ನೀಡಿದರು.

ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 49 ರನ್‌ ಸೇರಿಸಿದರು. ಹತ್ತನೇ ಓವರ್‌ನಲ್ಲಿ ಬೌಲರ್ ಜೆಸ್ ಜಾನ್ಸನ್ ಎಸೆತದಲ್ಲಿ ಹರ್ಲಿನ್ ಡಿಯೊಲ್ ಔಟಾದರು. ಇದರೊಂದಿಗೆ ಜೊತೆಯಾಟ ಮುರಿದುಬಿತ್ತು.

ಆಗ ಕ್ರೀಸ್‌ಗೆ ಬಂದ ಗಾರ್ಡನರ್ ಅವರು ಲಾರಾ ಜೊತೆಗೂಡಿ ಬೌಲರ್‌ಗಳ ಎಸೆತಗಳನ್ನು ದಂಡಿಸಿದರು. ಇವರಿಬ್ಬರ ಜೊತೆಯಾಟದಲ್ಲಿ ರನ್‌ಗಳು ಸರಾಗವಾಗಿ ಹರಿದು ಬಂದವು.

ಡೆಲ್ಲಿ ತಂಡದ ಬೌಲರ್ ಅರುಂಧತಿ ರೆಡ್ಡಿಯವರ ಎಸೆತದಲ್ಲಿ ಲಾರಾ ಕ್ಲೀನ್‌ಬೌಲ್ಡ್ ಆದರು. ಇನಿಂಗ್ಸ್‌ನ ಕೊನೆಯ ಏಳು ಎಸೆತಗಳಲ್ಲಿ 13 ರನ್‌ಗಳು ಬರಲು ಗಾರ್ಡನರ್ ಕಾರಣರಾದರು.

ಸಂಕ್ಷಿಪ್ತ ಸ್ಕೋರು
ಗುಜರಾತ್ ಜೈಂಟ್ಸ್:
20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 147 (ಲಾರಾ ವೊಲ್ವಾರ್ಡ್ 57, ಹರ್ಲೀನ್ ಡಿಯೊಲ್ 31, ಆ್ಯಷ್ಲೆ ಗಾರ್ಡನರ್ ಔಟಾಗದೆ 51, ಜೆಸ್ ಜಾನ್ಸನ್ 38ಕ್ಕೆ2)

ಡೆಲ್ಲಿ ಕ್ಯಾಪಿಟಲ್ಸ್‌: 18.4 ಓವರ್‌ಗಳಲ್ಲಿ 136 (ಮೆಗ್‌ ಲ್ಯಾನಿಂಗ್‌ 18, ಅಲೀಸ್‌ ಕ್ಯಾಪ್ಸಿ 22, ಮೆರಿಜಾನೆ ಕಾಪ್ 36, ಅರುಂಧತಿ ರೆಡ್ಡಿ 25, ಕಿಮ್‌ ಗಾರ್ತ್‌ 18ಕ್ಕೆ 2, ತನುಜಾ ಕನ್ವರ್‌ 29ಕ್ಕೆ 2, ಆ್ಯಷ್ಲೆ ಗಾರ್ಡನರ್ 19ಕ್ಕೆ 2)

ಫಲಿತಾಂಶ: ಗುಜರಾತ್‌ ಜೈಂಟ್ಸ್‌ಗೆ 11 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.