ADVERTISEMENT

ಪಂತ್‌ ಬ್ಯಾಟಿಂಗ್ ವೈಭವ: ಕ್ಯಾಪಿಟಲ್ಸ್‌ಗೆ ಜಯ

ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್‌ ಸ್ಫೋಟಕ ಅರ್ಧಶತಕ; ಅಜಿಂಕ್ಯ ರಹಾನೆ ಮೋಹಕ ಅರ್ಧಶತಕ ವ್ಯರ್ಥ

ಪಿಟಿಐ
Published 22 ಏಪ್ರಿಲ್ 2019, 19:36 IST
Last Updated 22 ಏಪ್ರಿಲ್ 2019, 19:36 IST
ರಿಷಭ್ ಪಂತ್‌
ರಿಷಭ್ ಪಂತ್‌   

ಜೈಪುರ:ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಸಿಕ್ಸರ್‌ಗಳು ರಾರಾಜಿಸಿದವು. ಬೌಂಡರಿಗಳು ಚಿತ್ತಾರ ಮೂಡಿಸಿದವು. ಆತಿಥೇಯ ರಾಜಸ್ಥಾನ್ ರಾಯಲ್ಸ್ ಎದುರಿನ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಜಯದ ಸಂಭ್ರಮದಲ್ಲಿ ಮಿಂದಿತು.

192 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪೃಥ್ವಿ ಶಾ (42; 39 ಎಸೆತ, 1 ಸಿಕ್ಸರ್‌, 4 ಬೌಂಡರಿ) ಮತ್ತು ರಿಷಭ್ ಪಂತ್ (ಅಜೇಯ 78; 36 ಎ, 4 ಸಿ, 6 ಬೌಂ) ಅವರ ಭರ್ಜರಿ ಆಟದ ನೆರವಿನಿಂದ ಆರು ವಿಕೆಟ್‌ಗಳ ಜಯ ಸಾಧಿಸಿತು. ಪೃಥ್ವಿ ಶಾ ಮೊದಲ ವಿಕೆಟ್‌ಗೆ ಶಿಖರ್ ಧವನ್ (54; 27 ಎ, 2 ಸಿ, 8 ಬೌಂ) ಅವರ ಜೊತೆ 72 ರನ್‌ ಸೇರಿಸಿದರು.

ನಾಯಕ ಶ್ರೇಯಸ್‌ ಅಯ್ಯರ್ ಕೇವಲ ನಾಲ್ಕು ರನ್‌ ಗಳಿಸಿ ಔಟಾದರು. ನಂತರ ಜೊತೆಗೂಡಿದ ಪೃಥ್ವಿ ಮತ್ತು ಪಂತ್‌ ಮೂರನೇ ವಿಕೆಟ್‌ಗೆ 84 ರನ್‌ಗಳನ್ನು ಸೇರಿಸಿ ಜಯವನ್ನು ಖಚಿತಪಡಿಸಿದರು. ಶಾ ಔಟಾದ ನಂತರವೂ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಪಂತ್‌ ಸುಲಭವಾಗಿ ಗೆಲುವು ಒಲಿಸಿಕೊಂಡರು.

ADVERTISEMENT

ಅಜಿಂಕ್ಯ ರಹಾನೆ ಎರಡನೇ ಶತಕ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್‌ ತಂಡ ರಹಾನೆ (ಅಜೇಯ 105; 63 ಎಸೆತ, 3 ಸಿಕ್ಸರ್‌, 11 ಬೌಂಡರಿ) ಮತ್ತು ಸ್ಮಿತ್‌ (50; 32 ಎಸೆತ, 8 ಬೌಂಡರಿ) ಅವರ ಮೋಹಕ ಬಲದಿಂದ ಉತ್ತಮ ಮೊತ್ತ ಪೇರಿಸಿತು.

ಎರಡನೇ ಓವರ್‌ನಲ್ಲಿ ಕಗಿಸೊ ರಬಾಡ ಅವರ ಚುರುಕಿನ ಫೀಲ್ಡಿಂಗ್‌ಗೆ ಸಂಜು ಸ್ಯಾಮ್ಸನ್‌ ರನೌಟ್ ಆದರು. ಈ ಸಂದರ್ಭದಲ್ಲಿ ಜೊತೆಗೂಡಿದ ರಹಾನೆ ಮತ್ತು ಸ್ಮಿತ್‌ ಎರಡನೇ ವಿಕೆಟ್‌ಗೆ 72 ಎಸೆತಗಳಲ್ಲಿ 130 ರನ್ ಕಲೆ ಹಾಕಿದರು.

ಸ್ಮಿತ್ ಔಟಾದ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. ಆದರೆ ರಹಾನೆ ಎದುರಾಳಿ ಬೌಲರ್‌ಗಳ ಮೇಲಿನ ದಾಳಿಯನ್ನು ಮುಂದುವರಿಸಿದರು. ಐಪಿಎಲ್‌ನಲ್ಲಿ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ಸ್ಟುವರ್ಟ್ ಬಿನ್ನಿ ಎರಡು ಬೌಂಡರಿಗಳೊಂದಿಗೆ 13 ಎಸೆತಗಳಲ್ಲಿ 19 ರನ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.