ADVERTISEMENT

IPL 2025: ಉಬರ್ ಜಾಹೀರಾತಿಗೆ ತಡೆಯಾಜ್ಞೆ ಕೋರಿ ಆರ್‌ಸಿಬಿ ಸಲ್ಲಿಸಿದ್ದ ಅರ್ಜಿ ವಜಾ

ಪಿಟಿಐ
Published 5 ಮೇ 2025, 11:37 IST
Last Updated 5 ಮೇ 2025, 11:37 IST
   

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ  ಅಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ತಂಡವು ಯೂಟ್ಯೂಬ್ ಜಾಹೀರಾತಿಗೆ ಸಂಬಂಧಿಸಿದಂತೆ ಊಬರ್ ಮೋಟೊ ವಿರುದ್ಧ ದಾಖಲಿಸಿದ್ದ ಮೊಕದ್ದಮೆಯನ್ನು ಸೋಮವಾರ ದೆಹಲಿ ಹೈಕೋರ್ಟ್ ವಜಾ ಮಾಡಿದೆ. 

ಈ ಜಾಹೀರಾತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟ್ರಾವಿಸ್ ಹೆಡ್ ಅಭಿನಯಿಸಿದ್ದಾರೆ. ಜಾಹೀರಾತಿನಲ್ಲಿ ತಮ್ಮ ಫ್ರ್ಯಾಂಚೈಸಿಯ ಟ್ರೇಡ್‌ಮಾರ್ಕ್‌ಗೆ ಅವಹೇಳನ ಮಾಡಲಾಗಿದೆ ಎಂದು ಆರ್‌ಸಿಬಿಯು ಊಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ ವಿರುದ್ಧ  ಅರ್ಜಿ ದಾಖಲಿಸಿತ್ತು. 

ಪ್ರಕರಣದ ವಿಚಾರಣೆ ನಡೆಸಿದ ಜಸ್ಟಿಸ್ ಸೌರಭ್ ಬ್ಯಾನರ್ಜಿ, ‘ಜಾಹೀರಾತಿನಲ್ಲಿ ಯಾವುದೇ ಅವಹೇಳನಕಾರಿ ಅಥವಾ ನಿಯಮ ಉಲ್ಲಂಘನೆಯ ಅಂಶಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ.  ಕ್ರಿಕೆಟ್‌ ಹಿನ್ನೆಲೆಯ ಜಾಹೀರಾತು ಇದಾಗಿದೆ. ಲಘು ಹಾಸ್ಯಮಿಶ್ರಿತ ಮತ್ತು ಆರೋಗ್ಯಪೂರ್ಣ ಧಾಟಿಯ ದೃಶ್ಯಗಳಿವೆ. ಇದರಲ್ಲಿ ಯಾವುದೇ ನ್ಯಾಯಾಲಯದ ಮಧ್ಯಸ್ಥಿಕೆ  ಬೇಕಿಲ್ಲ’ ಎಂದಿದ್ದಾರೆ. 

ADVERTISEMENT

ಊಬರ್‌ ಜಾಹೀರಾತಿನ ವಿಡಿಯೊದಲ್ಲಿ; ಬೆಂಗಳೂರಿನ ಕ್ರಿಕೆಟ್ ಕ್ರೀಡಾಂಗಣದ ಬಳಿ ಬರೆಯಲಾಗಿದ್ದ ಬೆಂಗಳೂರು ವರ್ಸಸ್ ಹೈದರಾಬಾದ್ ಎಂದು ಬರೆದಿರುವ ಫಲಕದ ಮೇಲೆ  ಟ್ರಾವಿಸ್ ಹೆಡ್ ಮತ್ತು ಇನ್ನೊಬ್ಬ ನಟ ಸೇರಿ, ‘ರಾಯಲ್ಲಿ ಚಾಲೆಂಜ್ಡ್‌ ಬೆಂಗಳೂರು’ ಎಂದು ಸ್ಪ್ರೇ ಮೂಲಕ ಬರೆಯುವ ದೃಶ್ಯವಿದೆ. ಇದು ತಮ್ಮ ಫ್ರ್ಯಾಂಚೈಸಿಯ ಟ್ರೇಡ್‌ಮಾರ್ಕ್‌ ಗೆ ಮಾಡಿರುವ ಅವಹೇಳನ ಎಂದು ಆರ್‌ಸಿಬಿ ದೂರು ದಾಖಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.