ADVERTISEMENT

ಭಾರತವೇ ವಿಶ್ವಕಪ್ ಗೆಲ್ಲಲಿದೆ; ಪಾಕ್ ವಿರುದ್ಧ ಸೋಲಿನ ಬಳಿಕವೂ ಸೆಹ್ವಾಗ್ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 17:34 IST
Last Updated 27 ಅಕ್ಟೋಬರ್ 2021, 17:34 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಎದುರಾದ ಹೀನಾಯ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾವೇ ವಿಶ್ವಕಪ್ ಗೆಲ್ಲಲಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ವೀರೂ ಪ್ರತಿಕ್ರಿಯಿಸಿದ್ದಾರೆ. 'ನನ್ನ ಪ್ರಕಾರ ಭಾರತವೇ ವಿಶ್ವಕಪ್ ಗೆಲ್ಲಲಿದೆ. ಆದರೆ ಇಲ್ಲಿಂದ ಮುಂದಕ್ಕೆ ಉತ್ತಮ ಕ್ರಿಕೆಟ್ ಆಡಬೇಕಿದೆ' ಎಂದು ಹೇಳಿದ್ದಾರೆ.

'ನಾವು ಯಾವಾಗಲೂ ನಮ್ಮ ತಂಡ ಗೆದ್ದಾಗ ಹುರಿದುಂಬಿಸುತ್ತೇವೆ. ಆದರೆ ಸೋತ ಸಂದರ್ಭದಲ್ಲೂ ಅದಕ್ಕಿಂತಲೂ ಹೆಚ್ಚು ಬೆಂಬಲಿಸಬೇಕು. ಭಾರತವೇ ವಿಶ್ವಕಪ್ ಗೆಲ್ಲಲಿದೆ ಎಂಬುದು ನನ್ನ ನಂಬಿಕೆಯಾಗಿದೆ' ಎಂದು ತಿಳಿಸಿದರು.

ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಮೊದಲ ಬಾರಿಗೆ ಸೋಲಿನ ಮುಖಭಂಗಕ್ಕೊಳಗಾಗಿತ್ತು.

ಈ ನಡುವೆ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಗೆಲುವಿನ ಬಳಿಕ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು. 'ಮುಂದಿನ ಮೂರು ಪಂದ್ಯಗಳಲ್ಲಿ ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ಸವಾಲನ್ನು ಎದುರಿಸಲಿದ್ದು, ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೂ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಲಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.