ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಬ್ಯಾಟಿಂಗ್ ವೈಖರಿ
ಚಿತ್ರಕೃಪೆ: X / @RCBTweets
ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಕನ್ನಡಿಗ ದೇವದತ್ತ ಪಡಿಕ್ಕಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸಾವಿರ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ನೀಡಿದ್ದ 174 ರನ್‌ಗಳ ಸ್ಪರ್ಧಾತ್ಮಕ ಮೊತ್ತದ ಬೆನ್ನತ್ತಿದ ಆರ್‌ಸಿಬಿ, ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು.
ಆರಂಭಿಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಗಳಿಸಿದ ಅಮೋಘ ಅರ್ಧಶತಕ ಹಾಗೂ ಪಡಿಕ್ಕಲ್ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 18.3 ಓವರ್‌ಗಳಲ್ಲೇ ಒಂದು ವಿಕೆಟ್‌ಗೆ 175 ರನ್ ಬಾರಿಸಿತು.
ಸಾಲ್ಟ್, ಕೇವಲ 33 ಎಸೆತಗಳಲ್ಲಿ 65 ರನ್ ಸಿಡಿಸಿದರು. ಅಜೇಯವಾಗಿ ಉಳಿದ ಕೊಹ್ಲಿ ಮತ್ತು ಪಡಿಕ್ಕಲ್ ಕ್ರಮವಾಗಿ 62 ರನ್ ಹಾಗೂ 40 ರನ್ ಬಾರಿಸಿದರು.
ಪಡಿಕ್ಕಲ್ 1,000 ರನ್
ಆರ್‌ಸಿಬಿ ಪರ ಈವರೆಗೆ 35 ಪಂದ್ಯಗಳಲ್ಲಿ ಆಡಿರುವ ಪಡಿಕ್ಕಲ್, 6 ಅರ್ಧಶತಕ ಮತ್ತು 1 ಶತಕ ಸಹಿತ 1,003 ರನ್ ಗಳಿಸಿದ್ದಾರೆ. ಇದರೊಂದಿಗೆ ಅವರು, ಬೆಂಗಳೂರು ತಂಡದ ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಇದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ, 8,252 ರನ್ ಗಳಿಸಿದ್ದು, ಅಗ್ರಸ್ಥಾನದಲ್ಲಿದ್ದಾರೆ.
33 ಪಂದ್ಯಗಳ 29 ಇನಿಂಗ್ಸ್‌ಗಳಲ್ಲಿ 985 ರನ್ ಗಳಿಸಿರುವ ನಾಯಕ ರಜತ್ ಪಾಟೀದಾರ್ 3ನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.