
ಕರ್ನಾಟಕ ತಂಡದ ದೇವದತ್ತ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಜೊತೆಯಾಟ –ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಸೋಮವಾರ ಇಡೀ ದಿನ ಮೈಕೊರೆಯುತ್ತಿದ್ದ ಚಳಿಗಾಳಿಗೆ ಮತ್ತಷ್ಟು ತಂಪೇರಿಸುತ್ತಿದ್ದ ತುಂತುರು ಮಳೆ ಹನಿಗಳು. ಈ ವಾತಾವರಣದ ನಡುವೆಯೂ ಪಟ್ಟುಬಿಡದೇ ಹೋರಾಡಿದ ಕರ್ನಾಟಕದ ಕ್ರಿಕೆಟ್ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ರಹದಾರಿ ಗಿಟ್ಟಿಸಿಕೊಂಡಿತು.
ನಗರದ ಹೊರವಲಯದಲ್ಲಿರುವ ಸಿಂಗಹಳ್ಳಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನ (1)ದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕವು 55 ರನ್‌ಗಳಿಂದ (ವಿಜೆಡಿ ನಿಯಮದನ್ವಯ) ಮುಂಬೈ ಎದುರು ಜಯಗಳಿಸಿತು. ಹಾಲಿ ಚಾಂಪಿಯನ್ ತಂಡವು 254 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟುವ ವೇಳೆ ಸಂಜೆ 4.20ಕ್ಕೆ ಮಳೆ ಜೋರಾಯಿತು. ಆಗ ತಂಡವು 33 ಓವರ್‌ಗಳಲ್ಲಿ 1 ವಿಕೆಟ್‌ಗೆ 187 ರನ್ ಗಳಿಸಿತ್ತು. ವಿ.ಜಯದೇವನ್ ನಿಯಮದಡಿ ಗಳಿಸಬೇಕಿದ್ದ ಕನಿಷ್ಠ ಮೊತ್ತಕ್ಕಿಂತಲೂ 55 ರನ್ ಮುಂದಿತ್ತು.
ಮಳೆಯ ಮುನ್ಸೂಚನೆ ಮೊದಲೆ ಇದ್ದ ಕಾರಣ ವೇಗವಾಗಿ ರನ್ ಕಲೆಹಾಕುವ ತಂತ್ರಗಾರಿಕೆಯಲ್ಲಿ ದೇವದತ್ತ ಪಡಿಕ್ಕಲ್ (ಅಜೇಯ 81) ಮತ್ತು ಕರುಣ್ ನಾಯರ್ (ಔಟಾಗದೇ 74) ಯಶಸ್ವಿಯಾದರು. ಪ್ರಸಕ್ತ ಟೂರ್ನಿಯಲ್ಲಿ ನಾಲ್ಕು ಶತಕ ಗಳಿಸಿರುವ ದೇವದತ್ತ ಅವರು ಐದನೇಯ ಬಾರಿ ಮೂರಂಕಿ ಗಡಿ ದಾಟುವ ಅವಕಾಶವು ಮಳೆಯಿಂದಾಗಿ ಕೈತಪ್ಪಿತು. ಆದರೆ ಅತ್ಯಧಿಕ ರನ್ ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡರು. ಅವರ ಖಾತೆಯಲ್ಲಿ ಈಗ ಒಟ್ಟು 721 ರನ್‌ಗಳು ಇವೆ. ದೇವದತ್ತ ಮತ್ತು ಕರುಣ್ ಅವರು ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 143 ರನ್ ಗಳಿಸಿದರು.
ದೇವದತ್ತ ಅವರಿಗೆ ಅದೃಷ್ಟವೂ ಜೊತೆಯಾಯಿತು. 9ನೇ ಓವರ್‌ನಲ್ಲಿ ಸಾಯಿರಾಜ್ ಪಾಟೀಲ ಬೌಲಿಂಗ್‌ನಲ್ಲಿ ಓಂಕಾರ್ ಅವರು ಬೌಂಡರಿಲೈನ್ ಬಳಿ ಕ್ಯಾಚ್ ಕೈಚೆಲ್ಲಿದರು ಆಗ ದೇವದತ್ತ 24 ರನ್ ಗಳಿಸಿದ್ದರು. ಸ್ವಲ್ಪ ಹೊತ್ತಿನ ನಂತರ ಮೋಹಿತ್ ಅವಸ್ಥಿ ಓವರ್‌ನಲ್ಲಿ ಸ್ಲಿಪ್‌ನಲ್ಲಿದ್ದ ಅಂಗಕ್ರಿಷ್ ರಘುವಂಶಿ ಸುಲಭ ಕ್ಯಾಚ್ ಪಡೆಯುವಲ್ಲಿ ಎಡವಿದರು. ಮುಂಬೈ ಫೀಲ್ಡರ್‌ಗಳ ಕಳಪೆ ಫೀಲ್ಡಿಂಗ್‌ನಿಂದಾಗಿ ಬ್ಯಾಟರ್‌ಗಳಿಗೆ ಬೌಂಡರಿಗಳೂ ಸರಾಗವಾಗಿ ಲಭಿಸಿದವು.
10ನೇ ಓವರ್‌ನಲ್ಲಿ ಮಯಂಕ್ ಅಗರವಾಲ್ (12 ರನ್) ವಿಕೆಟ್ ಪಡೆಯುವಲ್ಲಿ ಮೋಹಿತ್ ಯಶಸ್ವಿಯಾದರು. ನಂತರ ದೇವದತ್ತ ಮತ್ತು ಕರುಣ್ ಅವರದ್ದೇ ಆಟ ನಡೆಯಿತು. ದೇವದತ್ತ 62 ಎಸೆತಗಳಲ್ಲಿ ಹಾಗೂ ಕರುಣ್ 44 ಎಸೆತಗಳಲ್ಲಿ ತಮ್ಮ ಅರ್ಧಶತಕ ತಲುಪಿದರು.
ವಿದ್ಯಾಧರ್, ಮುಲಾನಿ ಮಿಂಚು: ಬೆಳಿಗ್ಗೆ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರ್ಧಾರವನ್ನು ಬೌಲರ್‌ಗಳೂ ಸಮರ್ಥಿಸುವಂತೆ ಬೌಲಿಂಗ್ ಮಾಡಿದರು. ಮುಂಬೈ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 254 ರನ್ ಗಳಿಸಿತು.
ಸ್ಪರ್ಧಾತ್ಮಕ ಪಿಚ್‌ನಲ್ಲಿ ಮುಂಬೈ ಆರಂಭಿಕ ಜೋಡಿ ಅಂಗಕ್ರಿಷ್ ಮತ್ತು ಇಶಾನ್ ಮೂಲಚಂದಾನಿ ತಾಳ್ಮೆಯಿಂದ ಆಡಿ 36 ರನ್ ಕಲೆಹಾಕಿದರು. ಈ ಹಂತದಲ್ಲಿ ರಾಯಚೂರು ಹುಡುಗ ವಿದ್ಯಾಧರ್ ಪಾಟೀಲ ‘ಬಿಸಿ’ ಮುಟ್ಟಿಸಿದರು. ವಿದ್ಯಾಧರ್ ಎಸೆತದಲ್ಲಿ ಇಶಾನ್ ಕೊಟ್ಟ ಕ್ಯಾಚ್ ದೇವದತ್ತ ಕೈಸೇರಿತು. ಇನ್ನೊಂದು ಓವರ್‌ನಲ್ಲಿ ವಿದ್ಯಾಧರ್ ಅವರು ಮುಷೀರ್ ಖಾನ್ ವಿಕೆಟ್ ಕಬಳಿಸಿದರು. ಗಾಯಗೊಂಡಿದ್ದ ಸರ್ಫರಾಜ್ ಖಾನ್ ಮತ್ತು ಇನ್ನುಳಿದ ಪ್ರಮುಖ ಬ್ಯಾಟರ್‌ಗಳ ಅನುಪಸ್ಥಿತಿಯು ಮುಂಬೈ ತಂಡಕ್ಕೆ ಮುಳುವಾಯಿತು.
ವೈಶಾಖ ವಿಜಯಕುಮಾರ್ ಅವರು ಅಂಗಕ್ರಿಷ್ ಅವರನ್ನು ಬೌಲ್ಡ್ ಮಾಡಿದರು. ಹಾರ್ದಿಕ್ ತಮೊರೆ ವಿಕೆಟ್ ವಿದ್ವತ್ ಪಾಲಾಯಿತು. ಇದರಿಂದಾಗಿ ಮುಂಬೈ ತಂಡವು 60 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ನಾಯಕ ಸಿದ್ದೇಶ್ ಲಾಡ್ (38 ರನ್) ಮತ್ತು ಶಮ್ಸ್ ಮುಲಾನಿ (86 ರನ್) ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 76 ರನ್ ಸೇರಿಸದೇ ಹೋಗಿದ್ದರೆ ಮುಂಬೈ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯುವ ಆತಂಕವಿತ್ತು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಎಲ್‌ಬಿಡಬ್ಲ್ಯು ಬಲೆಗೆ ಮುಲಾನಿ ಬಿದ್ದರು. ಲಾಡ್ ವಿಕೆಟ್ ಕೂಡ ಶೆಟ್ಟಿ ಖಾತೆ ಸೇರಿತು. ಕೊನೆಯ ಹಂತದಲ್ಲಿ ಸಾಯಿರಾಜ್ ಪಾಟೀಲ (33 ರನ್) ಕೂಡ ಮಹತ್ವದ ಕಾಣಿಕೆ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.