ADVERTISEMENT

SA-20 Auction: ದಾಖಲೆ ಮೊತ್ತಕ್ಕೆ ಹರಾಜಾದ 22 ವರ್ಷದ ಡೆವಾಲ್ಡ್ ಬ್ರೆವಿಸ್

ಪಿಟಿಐ
Published 10 ಸೆಪ್ಟೆಂಬರ್ 2025, 10:03 IST
Last Updated 10 ಸೆಪ್ಟೆಂಬರ್ 2025, 10:03 IST
   

ಜೋಹಾನ್ಸ್‌ಬರ್ಗ್: ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಅವರು ದಕ್ಷಿಣ ಆಫ್ರಿಕಾ ಟಿ–20 ಲೀಗ್‌ನ 4ನೇ ಆವೃತ್ತಿಯ ಹರಾಜಿನಲ್ಲಿ ₹8.3 ಕೋಟಿ ಮೊತ್ತಕ್ಕೆ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಪಾಲಾಗಿದ್ದಾರೆ.

ದಕ್ಷಿಣ ಆಫ್ರಿಕಾ ಟಿ–20 ಲೀಗ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎನ್ನುವ ಖ್ಯಾತಿಗೆ 22 ವರ್ಷದ ಬ್ರೆವಿಸ್ ಪಾತ್ರರಾಗಿದ್ದಾರೆ. 2022ರಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ₹4.6 ಕೋಟಿಗೆ ಹರಾಜಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕೋಚ್‌ ಆಗಿರುವ ಪ್ರಿಟೋರಿಯಾ ಕ್ಯಾಪಿಟಲ್ಸ್‌ ಹಾಗೂ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಗಳು ‘ಬೆಬಿ ಎಬಿಡಿ’ ಖ್ಯಾತಿಯ ಬ್ಯಾಟರ್‌ ಬ್ರೆವಿಸ್ ಅವರಿಗಾಗಿ ಪೈಪೋಟಿ ನಡೆಸಿದವು.

ADVERTISEMENT

‘ಡೆವಾಲ್ಡ್ ಬ್ರೆವಿಸ್ ಅವರು ಉತ್ತಮ ಆಟಗಾರ. ಕಳೆದ ಒಂದೂವರೆ ವರ್ಷದಿಂದ ಅವರ ಆಟವು ಇನ್ನೂ ಉತ್ತಮಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರ ಸಾಮರ್ಥ್ಯವು ಸಾಬೀತಾಗಿದೆ’ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಟಿ–20 ನಾಯಕ ಏಡನ್‌ ಮಾರ್ಕರಂ ಅವರನ್ನು ಡರ್ಬನ್‌ ಸೂಪರ್ ಜೈಂಟ್ಸ್ ತಂಡವು ₹7 ಕೋಟಿ ಮೊತ್ತಕ್ಕೆ ಖರೀದಿಸಿದೆ. ವಿಯಾನ್‌ ಮುಲ್ಡರ್‌(₹4.5 ಕೋಟಿ), ನಾಂಡ್ರೆ ಬರ್ಗರ್(₹3.1 ಕೋಟಿ) ಹರಾಜಿನಲ್ಲಿ ಹೆಚ್ಚು ಮೊತ್ತ ಪಡೆದುಕೊಂಡರು.

ಹರಾಜಿನಲ್ಲಿ ಒಟ್ಟು 84 ಆಟಗಾರರನ್ನು ಖರೀದಿಸಲು 6 ತಂಡಗಳು ₹65 ಕೋಟಿ ಬಳಸಿಕೊಂಡವು. ಇದರಲ್ಲಿ ₹59 ಕೋಟಿ ಮೊತ್ತವು ದಕ್ಷಿಣ ಆಫ್ರಿಕಾ ಆಟಗಾರರ ಪಾಲಾಯಿತು.

ದಕ್ಷಿಣ ಆಫ್ರಿಕಾ ಟಿ–20 ಲೀಗ್‌ನ 4ನೇ ಆವೃತ್ತಿಯು ಡಿಸೆಂಬರ್‌ 26 ರಿಂದ 2026ರ ಜನವರಿ 25ರವರೆಗೆ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.