ADVERTISEMENT

ಇಂಡಿಯನ್ ಪ್ರೀಮಿಯರ್ ಲೀಗ್ ಸಿದ್ಧತೆ: ಚೆನ್ನೈಗೆ ಬಂದಿಳಿದ ಮಹೇಂದ್ರಸಿಂಗ್ ಧೋನಿ

9 ರಿಂದ ಸಿಎಸ್‌ಕೆ ಶಿಬಿರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 12:54 IST
Last Updated 4 ಮಾರ್ಚ್ 2021, 12:54 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಚೆನ್ನೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಬುಧವಾರ ರಾತ್ರಿ ಚೆನ್ನೈಗೆ ಬಂದಿಳಿದಿದ್ದಾರೆ.

ಇದೇ 9ರಿಂದ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಅಭ್ಯಾಸ ಆರಂಭಿಸುವ ನಿರೀಕ್ಷೆ ಇದೆ. ಧೋನಿ ಈಗ ಐದು ದಿನಗಳ ಕ್ವಾರಂಟೈನ್ ನಿಯಮ ಪಾಲಿಸಲಿದ್ದಾರೆ.

ಬುಧವಾರ ಅವರು ಚೆನ್ನೈ ವಿಮಾನನಿಲ್ದಾಣಕ್ಕೆ ಬಂದಿಳಿದ ಚಿತ್ರವನ್ನು ಸಿಎಸ್‌ಕೆಯು ಟ್ವಿಟರ್‌ನಲ್ಲಿ ಹಾಕಿದೆ.

ADVERTISEMENT

ತಂಡದ ಮತ್ತೊಬ್ಬ ಆಟಗಾರ ಅಂಬಟಿ ರಾಯುಡು ಕೂಡ ಚೆನ್ನಗೆ ತಲುಪಿದ್ದಾರೆ. ಸಿಎಸ್‌ಕೆ ಬಳಗದಲ್ಲಿರುವ ತಮಿಳುನಾಡಿನ ಆಟಗಾರರು ಕೆಲವು ದಿನಗಳ ನಂತರ ಶಿಬಿರ ಸೇರಿಕೊಳ್ಳಲಿದ್ದಾರೆ.

’ಮಾರ್ಚ್ 9ರಂದು ಶಿಬಿರ ಶುರುವಾಗುವ ಸಾಧ್ಯತೆ ಇದೆ. ಸದ್ಯ ಲಭ್ಯವಿರುವ ಆಟಗಾರರು ತರಬೇತಿ ಮತ್ತು ಅಭ್ಯಾಸದಲ್ಲಿ ಭಾಗವಹಿಸುವರು. ಅದಕ್ಕೂ ಮುನ್ನ ಎಲ್ಲರೂ ತಲಾ ಮೂರು ಸಲ ಕೋವಿಡ್‌ ಪರೀಕ್ಷೆಗೊಳಗಾಗಬೇಕು. ನೆಗೆಟಿವ್ ಟೆಸ್ಟ್ ವರದಿಯಾಗಬೇಕು‘ ಎಂದು ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥ್ ತಿಳಿಸಿದ್ದಾರೆ.

ಹೋದ ತಿಂಗಳು ನಡೆದಿದ್ದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ತಂಡವು ಇಂಗ್ಲೆಂಡ್ ಆಲ್‌ರೌಂಡರ್ ಮೋಯಿನ್ ಅಲಿ (₹ 7 ಕೋಟಿ), ಕರ್ನಾಟಕದ ಆಲ್‌ರೌಂಡರ್ ಕೆ. ಗೌತಮ್ (₹ 9.25 ಕೋಟಿ) ಮತ್ತು ಚೇತೇಶ್ವರ್ ಪೂಜಾರ (₹ 50 ಲಕ್ಷ) ಅವರನ್ನು ಖರೀದಿಸಿತ್ತು.

ತಮಿಳುನಾಡಿನ ಯುವ ಆಟಗಾರರಾದ ಸಿ. ಹರಿ ನಿಶಾಂತ್, ಹರಿಶಂಕರ್ ರೆಡ್ಡಿ ಮತ್ತು ಭಗತ್ ವರ್ಮಾ (ತಲಾ ₹ 20 ಲಕ್ಷ) ಅವರನ್ನೂ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು.

ಹೋದ ಬಾರಿ ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಚೆನ್ನೈ ತಂಡವು ಪ್ಲೇಆಫ್ ಹಂತಕ್ಕೂ ತಲುಪಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.