ADVERTISEMENT

ಡಿಜಿಟಲ್ ಗೋಡೆಯ ಪೋಸ್ಟರ್ ಬಾಯ್ ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 19:30 IST
Last Updated 13 ಡಿಸೆಂಬರ್ 2020, 19:30 IST
ಅನುಷ್ಕಾ ಶರ್ಮಾ – ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ – ವಿರಾಟ್ ಕೊಹ್ಲಿ   

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವರ್ಷದ 365 ದಿನವೂ ಒಂದಿಲ್ಲೊಂದು ರೀತಿಯ ಸುದ್ದಿಯಲ್ಲಿರುತ್ತಾರೆ. ಮೈದಾನಕ್ಕಿಳಿದರೆ ರನ್‌ ಗಳಿಕೆಯ ದಾಖಲೆಗಳು, ಕ್ಯಾಚ್ ಪಡೆದ ವಿಕ್ರಮಗಳು ಇದ್ದೇಇರುತ್ತವೆ. ಬಿಡುವಿನಲ್ಲಿದ್ದರೆ ಪತ್ನಿ ಅನುಷ್ಕಾ ಅವರೊಂದಿಗಿನ ವಿಹಾರ, ಜಿಮ್ನಾಷಿಯಂನಲ್ಲಿನ ವರ್ಕೌಟ್ ಇನ್ನಿತರ ಚಟುವಟಿಕೆಗಳಲ್ಲಿ ಮಿಂಚುತ್ತಾರೆ.

ಅವರ ಈ ತಾರಾ ವರ್ಚಸ್ಸಿನಿಂದಾಗಿ ಸಾಮಾಜಿಕ ಜಾಲತಾಣಗಳು ಸದಾ ಅವರ ಸುತ್ತಲೇ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಒಂದೊಂದು ಪೋಸ್ಟ್‌ ಅನ್ನು ಲಕ್ಷಾಂತರ ಜನರು ನೋಡುತ್ತಾರೆ. ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ 25ರೊಳಗೆ ವಿರಾಟ್ ಇದ್ದಾರೆ. ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಇದ್ದಾರೆ.

ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಖ್ಯಾತನಾಮರು ಈ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಪ್ರತಿ ಪೋಸ್ಟ್‌ಗೆ 45 ಲಕ್ಷ ಅಭಿಮಾನಿಗಳು ಫಾಲೋ ಮಾಡುತ್ತಾರೆ. ವಿರಾಟ್ 11ನೇ ಸ್ಥಾನದಲ್ಲಿದ್ದಾರೆ. ಅವರ ಪ್ರತಿಯೊಂದು ಪೋಸ್ಟ್‌ಗೆ 25 ಲಕ್ಷಕ್ಕೂ ಹೆಚ್ಚು ಜನರಿಂದ ಸ್ಪಂದನೆ ದೊರೆಯುತ್ತಿದೆ. ಅನುಷ್ಕಾ 24ನೇ ಸ್ಥಾನದಲ್ಲಿದ್ದಾರೆ. ಅವರಿಗೆ ಸುಮಾರು 20 ಲಕ್ಷ ಫಾಲೋವರ್ಸ್ ಇದ್ದಾರೆ.ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 17ನೇ ಸ್ಥಾನದಲ್ಲಿದ್ದಾರೆ.

ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿರುವ ವಿಶ್ವದ ಒಂದು ಸಾವಿರ ಪ್ರಮುಖರ ಪೋಸ್ಟ್‌ಗಳನ್ನು ವಿಶ್ಲೇಷಣೆ ಮಾಡಿ ಈ ರ‍್ಯಾಂಕಿಂಗ್ ನೀಡಲಾಗಿದೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಪೋಸ್ಟ್‌ ವೀಕ್ಷಣೆಗೆ ಮತ್ತು ಪ್ರತಿಕ್ರಿಯಿಸಲು ಅಭಿಮಾನಿಗಳು ತೊಡಗಿಕೊಳ್ಳುವ ಸಮಯ ಮತ್ತಿತರ ಅಂಶಗಳನ್ನು ಲೆಕ್ಕ ಹಾಕಲಾಗಿದೆ. ಅಲ್ಲದೇ ಈ ಸೆಲೆಬ್ರಿಟಿಗಳನ್ನು ಫಾಲೋ ಮಾಡುವ ಪ್ರಮುಖ ವ್ಯಕ್ತಿಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಇತ್ತೀಚೆಗಷ್ಟೇ ವಿರಾಟ್ ದಂಪತಿಯ ಚಿತ್ರವು ಟ್ವಿಟರ್‌ನಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿತ್ತು. ಕ್ರಿಕೆಟ್‌ ಅಂಗಳದಲ್ಲಿ ದಾಖಲೆವೀರನಾಗುವ ಜೊತೆಗೆ ಡಿಜಿಟಲ್ ತಾಣಗಳಲ್ಲಿಯೂ ವಿರಾಟ್ ಪೋಸ್ಟರ್ ಬಾಯ್ ಆಗಿದ್ದಾರೆ.

ತಮ್ಮ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿ, ತಮ್ಮ ಕಂದನ ಆಗಮನಕ್ಕಾಗಿ ಹಾಕಿರುವ ಕೆಲವು ಪೋಸ್ಟ್‌ಗಳು ಬಹಳಷ್ಟು ಮೆಚ್ಚುಗೆ ಗಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.