ADVERTISEMENT

ರಣಜಿ ಟ್ರೋಫಿ | ಜೈಸ್ವಾಲ್ ಅರ್ಧಶತಕ; ಅಗರವಾಲ್ ಶಿಸ್ತಿನ ದಾಳಿ

ಮುಂಬೈ ಬ್ಯಾಟರ್‌ಗಳಿಗೆ ಮಧ್ಯಪ್ರದೇಶ ಬೌಲರ್‌ಗಳ ಕಠಿಣ ಸವಾಲು

ಗಿರೀಶದೊಡ್ಡಮನಿ
Published 22 ಜೂನ್ 2022, 19:14 IST
Last Updated 22 ಜೂನ್ 2022, 19:14 IST
ಮಧ್ಯಪ್ರದೇಶ ತಂಡದ ಅನುಭವ್ ಅಗರವಾಲ್  –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್
ಮಧ್ಯಪ್ರದೇಶ ತಂಡದ ಅನುಭವ್ ಅಗರವಾಲ್  –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್   

ಬೆಂಗಳೂರು: ಮುಂಬೈ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಮತ್ತು ಸೆಮಿಫೈನಲ್‌ನಲ್ಲಿ ರನ್‌ಗಳ ರಾಶಿ ಪೇರಿಸಿತ್ತು.ಆದರೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಫೈನಲ್‌ನಲ್ಲಿ ಮಧ್ಯಪ್ರದೇಶದ‌ಬೌಲರ್‌ಗಳು ಮುಂಬೈ ‘ಓಟ’ಕ್ಕೆ ತಡೆಯೊಡ್ಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 248 ರನ್‌ ಗಳಿಸಿತು. ಈ ಋತುವಿನಲ್ಲಿ 800ಕ್ಕೂ ಹೆಚ್ಚು ರನ್ ಗಳಿಸಿರುವ ಸರ್ಫರಾಜ್ ಖಾನ್ (ಬ್ಯಾಟಿಂಗ್ 40; 125 ಎಸೆತ) ಮತ್ತು ಆಲ್‌ರೌಂಡರ್ ಶಮ್ಸ್ ಮಲಾನಿ (ಬ್ಯಾಟಿಂಗ್ 12, 43ಎಸೆತ) ಕ್ರೀಸ್‌ನಲ್ಲಿದ್ದಾರೆ. ಮುಂಬೈ ಇನಿಂಗ್ಸ್‌ಗೆ ಉತ್ತಮ ಆರಂಭ ನೀಡಿದ ನಾಯಕ ಪೃಥ್ವಿ ಶಾ (47; 79ಎ, 4X5, 6X1) ಮತ್ತು ಯಶಸ್ವಿ ಜೈಸ್ವಾಲ್ (78; 163ಎ) ಅವರ ವಿಕೆಟ್‌ಗಳನ್ನು ಗಳಿಸಿದ ಬಲಗೈ ಮಧ್ಯಮವೇಗಿ ಅನುಭವ್ ಅಗರವಾಲ್ ಮುಂಬೈ ತಂಡದ ಬೃಹತ್ ಮೊತ್ತದ ಗುರಿಗೆ ಅಡ್ಡಿಯಾದರು.

ಯಶಸ್ವಿ ಕಳೆದ ಮೂರು ಇನಿಂಗ್ಸ್‌ಗಳಲ್ಲಿಯೂ ಶತಕ ದಾಖಲಿಸಿದ್ದರು. ಇಲ್ಲಿಯೂ ಕೂಡ ಅವರು ಶತಕದತ್ತ ಹೆಜ್ಜೆ ಇಟ್ಟಿದ್ದರು. ಆದರೆ ಊಟದ ನಂತರದ ಅವಧಿಯಲ್ಲಿ ಯಶ್ ದುಬೆ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು.

ADVERTISEMENT

ಅವರಿಗೆ ಉತ್ತಮ ಜೊತೆ ನೀಡಿದ ಆಫ್‌ಸ್ಪಿನ್ನರ್ ಸಾರಾಂಶ್ ಜೈನ್ (31ಕ್ಕೆ2) ಅರ್ಮಾನ್ ಜಾಫರ್ ಮತ್ತು ಹಾರ್ದಿಕ್ ತಮೊರೆ ವಿಕೆಟ್‌ಗಳನ್ನು ಕಬಳಿಸಿ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಸೆಮಿಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹಾರ್ದಿಕ್ ಮತ್ತು ಎರಡನೇಯದ್ದರಲ್ಲಿ ಜಾಫರ್ ಶತಕ ಗಳಿಸಿದ್ದರು.

ದೇಶಿ ಕ್ರಿಕೆಟ್‌ನಲ್ಲಿ 'ಚಾಂಪಿಯನ್ ಕೋಚ್’ ಎಂದೇ ಹೆಸರು ಗಳಿಸಿರುವ ಚಂದ್ರಕಾಂತ್ ಪಂಡಿತ್ ಮಾರ್ಗದರ್ಶನದ ಮಧ್ಯಪ್ರದೇಶ ತಂಡದ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರು. ಇದರಿಂದಾಗಿ ಮುಂಬೈ ಬ್ಯಾಟರ್‌ಗಳು ಸರಾಗವಾಗಿ ರನ್‌ ಗಳಿಸಲು ಸಾಧ್ಯವಾಗಲಿಲ್ಲ.

ಮುಂಬೈ 42ನೇ ರಣಜಿ ಟ್ರೋಫಿ ಜಯದತ್ತ ಕಣ್ಣು ನೆಟ್ಟಿದೆ. ಮಧ್ಯಪ್ರದೇಶ ತಂಡವು ಚೊಚ್ಚಲ ಪ್ರಶಸ್ತಿ ಗೆಲುವಿನ ಛಲದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.