ಯಶ್ ರಾಥೋಡ್
ಬೆಂಗಳೂರು: ಭರ್ತಿ ಎಂಟು ಗಂಟೆ ಕ್ರೀಸ್‌ನಲ್ಲಿ ಕಳೆದ ಯಶ್ ರಾಥೋಡ್ ಕೇವಲ ಆರು ರನ್‌ಗಳ ಅಂತರದಿಂದ ‘ದ್ವಿಶತಕ’ದ ಸಂಭ್ರಮವನ್ನು ತಪ್ಪಿಸಿಕೊಂಡರು. ಆದರೆ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಕೇಂದ್ರ ವಲಯ ಬಳಗದ ಗೆಲುವಿನ ಅವಕಾಶವನ್ನು ‘ದುಪ್ಟಟ್ಟು’ ಮಾಡಿದರು.
ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯುತ್ತಿರುವ ದಕ್ಷಿಣ ವಲಯದ ಎದುರಿನ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ರಜತ್ ಪಾಟೀದಾರ್ ಬಳಗವು ಮೊದಲ ಇನಿಂಗ್ಸ್‌ನಲ್ಲಿ 511 ರನ್ ಗಳಿಸಿ 362 ರನ್‌ಗಳ ಭಾರಿ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ವಲಯವು ದಿನದಾಟದ ಅಂತ್ಯಕ್ಕೆ 33 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 129 ರನ್ ಗಳಿಸಿದೆ. ಕನ್ನಡಿಗ ಸ್ಮರಣ್ ರವಿಚಂದ್ರನ್ (ಬ್ಯಾಟಿಂಗ್ 37) ಮತ್ತು ರಿಕಿ ಭುಯ್ (ಬ್ಯಾಟಿಂಗ್ 26) ಕ್ರೀಸ್‌ನಲ್ಲಿದ್ದಾರೆ.
ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿವೆ. ಕೇಂದ್ರ ವಲಯದ ಮೊದಲ ಇನಿಂಗ್ಸ್ ಮುನ್ನಡೆ ಚುಕ್ತಾ ಮಾಡಲು ದಕ್ಷಿಣ ವಲಯಕ್ಕೆ 233 ರನ್‌ಗಳು ಬೇಕು. ಅದರ ನಂತರ ಎದುರಾಳಿ ತಂಡಕ್ಕೆ ಕನಿಷ್ಠ 200 ರಿಂದ 250 ರನ್‌ಗಳ ಗುರಿ ನೀಡಬೇಕು. ನಂತರ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿದರಷ್ಟೇ ಟ್ರೋಫಿಗೆ ಮುತ್ತಿಡಲು ಸಾಧ್ಯ. ಆದ್ದರಿಂದ ಸ್ಮರಣ್ ಮತ್ತು ರಿಕಿ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ಆದರೆ ಕೇಂದ್ರ ತಂಡಕ್ಕೆ ಟ್ರೋಫಿ ಎತ್ತಿ ಹಿಡಿಯುವ ಹಾದಿ ಹೆಚ್ಚು ಕಠಿಣವೇನಿಲ್ಲ. ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿರುವುದರಿಂದ ತಂಡಕ್ಕೆ ಗೆಲ್ಲಲೇಬೇಕಾದ ಒತ್ತಡವೇನೂ ಇಲ್ಲ. ಡ್ರಾ ಆದರೂ ಸಾಕು. ಆದರೆ ದಕ್ಷಿಣ ವಲಯದ ಉಳಿದ ವಿಕೆಟ್ ಗಳಿಸಿ ‘ಇನಿಂಗ್ಸ್ ಗೆಲುವು’ ಸಾಧಿಸುವ ಛಲದಲ್ಲಿದೆ. ಆರ್‌ಸಿಬಿ ನಾಯಕನಾಗಿ ಮೂರು ತಿಂಗಳ ಹಿಂದೆ ಐಪಿಎಲ್ ಕಪ್ ಎತ್ತಿ ಹಿಡಿದಿದ್ದ ರಜತ್, ದುಲೀಪ್ ಟ್ರೋಫಿಗೂ ಮುತ್ತಿಕ್ಕುವ ಕನಸು ಕಾಣುತ್ತಿದ್ದಾರೆ.
ಯಶ್ ಬ್ಯಾಟಿಂಗ್: ಕೇಂದ್ರ ತಂಡವು ದೊಡ್ಡ ಮುನ್ನಡೆ ಪಡೆಯುವಲ್ಲಿ ಎಡಗೈ ಬ್ಯಾಟರ್ ಯಶ್ ಅವರ ಪಾಲು 194 (286ಎಸೆತ, 4X17, 6X2) ಉಳಿದ ಬ್ಯಾಟರ್‌ಗಳಿಗಿಂತ ಹೆಚ್ಚು.
ಶುಕ್ರವಾರ ರಜತ್ ಕೂಡ ಶತಕ ದಾಖಲಿಸಿದ್ದರು. ಅವರೊಂದಿಗೆ ಉಪಯುಕ್ತ ಜೊತೆಯಾಟವಾಡಿದ್ದ ಯಶ್ 137 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದರು. ಶನಿವಾರ ಬೆಳಿಗ್ಗೆ ಆಟ ಮುಂದುವರಿಸಿದರು. ಸಾರಾಂಶ್ ಜೈನ್ (69; 193ಎ, 4X7) ಜೊತೆ ಆರನೇ ವಿಕೆಟ್ ಜೊತೆಯಾಟದಲ್ಲಿ 176 ರನ್‌ಗಳನ್ನು ಸೇರಿಸಿದರು. ಯಶ್ ದ್ವಿಶತಕದತ್ತ ಹೆಜ್ಜೆಯಿಟ್ಟರು. ಚೆಂದದ ಡ್ರೈವ್, ಸ್ವೀಪ್‌ಗಳ ಮೂಲಕ ರನ್‌ಗಳನ್ನು ಸೂರೆ ಮಾಡಿದರು. ಆದರೆ ಊಟದ ವಿರಾಮದ ನಂತರ ಎಡಗೈ ವೇಗಿ ಗುರ್ಜಪನೀತ್ ಸಿಂಗ್ ಅವರ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದ ಯಶ್ ನಿರಾಸೆಯಿಂದ ನಿರ್ಗಮಿಸಿದರು. ನಂತರ 11 ರನ್‌ಗಳು ಸೇರುವಷ್ಟರಲ್ಲಿ ಉಳಿದ ಮೂರು ವಿಕೆಟ್‌ಗಳೂ ಪತನವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.