ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿ, ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಆಡಲು ಸಜ್ಜಾಗುತ್ತಿರುವ ಬೆಂಗಳೂರಿನ ಕರುಣ್ ನಾಯರ್ ತಮ್ಮ ವೃತ್ತಿಜೀವನದಲ್ಲಿ ಅನುಭವಿಸಿದ ಕಠಿಣ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದಾರೆ.
‘2022ರ ವರ್ಷಾಂತ್ಯ ನನ್ನ ಪಾಲಿಗೆ ಅತ್ಯಂತ ಕಠಿಣ ಅವಧಿಯಾಗಿತ್ತು. ಅದು ಒಂದು ರೀತಿಯ ಅಂಧಕಾರದ ಸಮಯ. ನನ್ನ ಕ್ರಿಕೆಟ್ ಜೀವನದ ಭಾವನಾತ್ಮಕ ಹಂತವೂ ಹೌದು. 2018ರಲ್ಲೂ ಇಷ್ಟೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದು ಆರ್.ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂವಾದದಲ್ಲಿ ತಿಳಿಸಿದ್ದಾರೆ.
ಈ ಅಸಾಧಾರಣ ಪುನರಾಗಮನ ಕರುಣ್ ಅವರ ಛಲದ ಮನೋಭಾವವನ್ನು ತೋರಿಸಿದೆ. ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಹೊರತುಪಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಅವರಾಗಿದ್ದಾರೆ.
‘ಕಳೆದ ಎರಡು ಮೂರು ವರ್ಷಗಳಲ್ಲಿ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರತಿ ಕ್ಷಣವನ್ನು ಗೌರವಿಸಲು ಮತ್ತು ಪ್ರತಿದಿನವನ್ನು ಹೊಸದೆಂದು ಪರಿಗಣಿಸುವುದನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ.
‘2017ರಲ್ಲಿ ಯಾವುದೇ ಸೂಚನೆಯಿಲ್ಲದೆ ಭಾರತ ಕ್ರಿಕೆಟ್ ತಂಡದಿಂದ ಕೈಬಿಟ್ಟಿದ್ದು ನನ್ನನ್ನು ಘಾಸಿಗೊಳಿಸಿತ್ತು. ಅಂದಿನಿಂದ ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಂತರದಲ್ಲಿ ನಾನು ದೇಶೀಯ ಕ್ರಿಕೆಟ್‌ಗೆ ಹಿಂತಿರುಗಬೇಕಾಯಿತು. ಈ ವೇಳೆ ಕರ್ನಾಟಕ ರಾಜ್ಯ ತಂಡದಿಂದ ಉತ್ತಮ ಬೆಂಬಲ ದೊರಕಿತ್ತು. ಈಗಲೂ ಕರ್ನಾಟಕದ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.
ಕಳೆದ ವಾರ ಇಂಗ್ಲೆಂಡ್ ಲಯನ್ಸ್ ವಿರುದ್ಧ ‘ಟೆಸ್ಟ್’ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಕರುಣ್ ದ್ವಿಶತಕವನ್ನು ಬಾರಿಸಿದ್ದರು. ಆ ಮೂಲಕ ಶುಕ್ರವಾರ ಲೀಡ್ಸ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ಗೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.