ADVERTISEMENT

T20 WC: ಫೈನಲ್‌ ನೆತ್ತಿಯ ಮೇಲೆ ‘ಮಳೆಮೋಡ’, ಇಂಗ್ಲೆಂಡ್–ಪಾಕ್ ಜಂಟಿ ಚಾಂಪಿಯನ್?

ಪಿಟಿಐ
Published 11 ನವೆಂಬರ್ 2022, 19:31 IST
Last Updated 11 ನವೆಂಬರ್ 2022, 19:31 IST
ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣ
ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣ   

ಮೆಲ್ಬರ್ನ್: ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಜಂಟಿ ಚಾಂಪಿಯನ್ ಆಗುವ ನಿರೀಕ್ಷೆ ಇದೆ.

ಪಂದ್ಯ ನಡೆಯವು ಅವಧಿಯ ಶೇ 95ರಷ್ಟು ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಸುಮಾರು 25 ಮಿಲಿಮೀಟರ್‌ ಮಳೆಯಾಗಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆಯು ‘ಇಎಸ್‌ಪಿಎನ್‌ ಕ್ರಿಕ್‌ಇನ್ಫೋ’ಗೆ ತಿಳಿಸಿದ್ದಾರೆ.

ಭಾನುವಾರ ಮಳೆಯಾಗಿ ಪಂದ್ಯ ನಡೆಯದಿದ್ದರೆ ಸೋಮವಾರವನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ ಆದರೆ ಆ ದಿನವೂ 5ರಿಂದ 10 ಮಿಲಿಮೀಟರ್‌ ಮಳೆಯಾಗುವ ಸಾಧ್ಯತೆ ಇದೆ.

ADVERTISEMENT

‘ಟೂರ್ನಿಯ ನಿಯಮಗಳ ಪ್ರಕಾರ ಅವಕಾಶ ಸಿಕ್ಕರೆ ಕನಿಷ್ಠ 10 ಓವರ್‌ಗಳ ಪಂದ್ಯ ಆಯೋಜಿಸಬಹುದು. ಇದಕ್ಕೆ ಆದ್ಯತೆ ನೀಡಲಾಗುವುದು. ಒಂದೊಮ್ಮೆ ಭಾನುವಾರ ಪಂದ್ಯವು ಆರಂಭವಾಗಿ ಮಳೆಯಿಂದ ಅರ್ಧಕ್ಕೆ ನಿಂತರೆ ಮರುದಿವಸ ಉಳಿದ ಭಾಗವನ್ನು ಮುಂದುವರಿಸಲಾಗುವುದು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7ಕ್ಕೆ ಪಂದ್ಯ ಆರಂಭವಾಗಲಿದೆ.

2019ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ಎರಡು ದಿನಗಳಲ್ಲಿ ನಡೆದಿತ್ತು.

2002ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ಫೈನಲ್ ಮಳೆಯಿಂದಾಗಿ ರದ್ದಾಗಿತ್ತು.

ಪ್ರಸ್ತುತ ಟೂರ್ನಿಯಲ್ಲಿ ಎಂ.ಸಿ.ಜಿಯಲ್ಲಿ ನಡೆದ ಮೂರು ಪಂದ್ಯಗಳು ಮಳೆಗೆ ರದ್ದಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.