ADVERTISEMENT

ಲಂಕಾ ಎದುರಿನ ಟಿ20 ಸರಣಿ: ಇಂಗ್ಲೆಂಡ್ ಶುಭಾರಂಭ

ಏಜೆನ್ಸೀಸ್
Published 24 ಜೂನ್ 2021, 14:28 IST
Last Updated 24 ಜೂನ್ 2021, 14:28 IST
ಅರ್ಧಶತಕ ಗಳಿಸಿ ಸಂಭ್ರಮಿಸಿದ ಜೋಸ್ ಬಟ್ಲರ್ –ರಾಯಿಟರ್ಸ್ ಚಿತ್ರ
ಅರ್ಧಶತಕ ಗಳಿಸಿ ಸಂಭ್ರಮಿಸಿದ ಜೋಸ್ ಬಟ್ಲರ್ –ರಾಯಿಟರ್ಸ್ ಚಿತ್ರ   

ಕಾರ್ಡಿಫ್‌, ಇಂಗ್ಲೆಂಡ್‌: ಇಂಗ್ಲೆಂಡ್ ಬೌಲರ್‌ಗಳ ಕರಾರುವಾಕ್ ದಾಳಿಗೆ ಬೆದರಿದ ಶ್ರೀಲಂಕಾ ಕಡಿಮೆ ಮೊತ್ತಕ್ಕೆ ಪತನ ಕಂಡಿತು. ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದರು. ಇದರಿಂದಾಗಿ ಇಂಗ್ಲೆಂಡ್ ಎಂಟು ವಿಕೆಟ್‌ಗಳಿಂದ ಜಯ ಗಳಿಸಿ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿತು.

ಸೋಫಿಯಾ ಗಾರ್ಡನ್‌ನಲ್ಲಿ ಬುಧವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್‌ಗಳಿಂದ ಜಯ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಏಳು ವಿಕೆಟ್‌ಗಳಿಗೆ 129 ರನ್ ಗಳಿಸಿತ್ತು. ಆವಿಷ್ಕಾ ಫೆರ್ನಾಂಡೊ ಶೂನ್ಯಕ್ಕೆ ಔಟಾದರೂ ಧನುಷ್ಕಾ ಗುಣತಿಲಕ ಮತ್ತು ನಾಯಕ ಕುಶಾಲ್ ಪೆರೇರ 28 ರನ್‌ಗಳ ಜೊತೆಯಾಟವಾಡಿದರು. ಧನುಷ್ಕಾ ಔಟಾದ ನಂತರ ವಿಕೆಟ್‌ಗಳು ಉರುಳಿದವು.ದಾಸುನ್ ಶನಕ ಏಕಾಂಗಿ ಹೋರಾಟ ನಡೆಸಿ 44 ಎಸೆತಗಳಲ್ಲಿ 50 ರನ್ ಗಳಿಸಿದ್ದರಿಂದ ಪ್ರವಾಸಿ ತಂಡಕ್ಕೆ ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಯಿತು. ಅವರು ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿದರು.

ADVERTISEMENT

ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಮತ್ತು ವೇಗಿ ಸ್ಯಾಮ್ ಕರನ್ ದಾಳಿಗೆ ನಲುಗಿದ ಶ್ರೀಲಂಕಾ ರನ್ ಗಳಿಸಲು ಪರದಾಡಿತು. 2015ರ ನಂತರ ಮೊದಲ ಬಾರಿ ಟಿ20 ಪಂದ್ಯ ಆಡಿದ ಕ್ರಿಸ್ ವೋಕ್ಸ್‌ ವಿಕೆಟ್ ಗಳಿಸಲಿಲ್ಲವಾದರೂ ಮೂರು ಓವರ್‌ಗಳಲ್ಲಿ 14 ರನ್ ಮಾತ್ರ ನೀಡಿ ಎದುರಾಳಿಗಳನ್ನು ನಿಯಂತ್ರಿಸಿದರು.

ವಿಶ್ವ ಟಿ20 ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ 130 ರನ್‌ಗಳ ಗೆಲುವಿನ ಗುರಿ ಬೆನ್ನತ್ತಲು ಕಷ್ಟವಾಗಲಿಲ್ಲ. ಇನ್ನೂ 17 ಎಸೆತಗಳು ಇರುವಾಗಲೇ ತಂಡ ಗೆಲುವಿನ ದಡ ಸೇರಿತು. ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಗಳಿಸಿದ ಬಟ್ಲರ್ 55 ಎಸೆತಗಳಲ್ಲಿ 68 ರನ್ ಗಳಿಸಿದರು. ಮೊದಲ ವಿಕೆಟ್‌ಗೆ ಜೇಸನ್ ರಾಯ್ ಜೊತೆ ಅವರು 80 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 129 (ಧನುಷ್ಕಾ ಗುಣತಿಲಕ 19, ಕುಶಲ್ ಪೆರೇರ 30, ದಾಸುನ್ ಶನಕ 50; ಸ್ಯಾಮ್ ಕರನ್ 25ಕ್ಕೆ2, ಮಾರ್ಕ್ ವುಡ್ 33ಕ್ಕೆ1, ಕ್ರಿಸ್ ಜೋರ್ಡಾನ್ 29ಕ್ಕೆ1, ಲಿಯಾಮ್ ಲಿವಿಂಗ್‌ಸ್ಟನ್ 9ಕ್ಕೆ1, ಆದಿಲ್ ರಶೀದ್ 17ಕ್ಕೆ2); ಇಂಗ್ಲೆಂಡ್‌: 17.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 130 (ಜೇಸನ್ ರಾಯ್ 36, ಜೋಸ್ ಬಟ್ಲರ್ ಔಟಾಗದೆ 68, ಜಾನಿ ಬೆಸ್ಟೊ ಔಟಾಗದೆ 13; ದುಶ್ಮಂತ ಚಮೀರ 24ಕ್ಕೆ1, ಇಸುರು ಉಡಾನ 30ಕ್ಕೆ1). ಫಲಿತಾಂಶ: ಇಂಗ್ಲೆಂಡ್‌ಗೆ 8 ವಿಕೆಟ್‌ಗಳ ಜಯ; ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.