ADVERTISEMENT

ನಾಲ್ಕನೇ ಟೆಸ್ಟ್ : ಎರಡೇ ದಿನದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಗೆದ್ದ ಇಂಗ್ಲೆಂಡ್

ಆಸ್ಟ್ರೇಲಿಯಾ ನೆಲದಲ್ಲಿ ಗೆಲುವಿಗೆ 15 ವರ್ಷಗಳ ಕಾಯುವಿಕೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 14:41 IST
Last Updated 27 ಡಿಸೆಂಬರ್ 2025, 14:41 IST
   

ಮೆಲ್ಬರ್ನ್: ಇಂಗ್ಲೆಂಡ್ ತಂಡ ಸುಮಾರು 15 ವರ್ಷಗಳಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಗೆಲುವನ್ನು ಸವಿಯಿತು. ಆಸ್ಟ್ರೇಲಿಯಾ ವಿರುದ್ಧ ಆ್ಯಷಸ್‌ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್ ತಂಡ ಶನಿವಾರ ಎರಡೇ ದಿನಗಳಲ್ಲಿ ನಾಲ್ಕು ವಿಕೆಟ್‌ಗಳಿಂದ ಜಯಿಸಿತು.

ಇದು 18 ಪಂದ್ಯಗಳ ನಂತರ ಇಂಗ್ಲೆಂಡ್ ಸಂಪಾದಿಸಿದ ಮೊದಲ ಗೆಲುವು ಸಹ. 5468 ದಿನಗಳ ನಂತರ ಆಸ್ಟ್ರೇಲಿಯಾದಲ್ಲಿ ಗೆಲುವು ಪಡೆದಿದೆ. ಮೊದಲ ಟೆಸ್ಟ್‌ ಸಹ ಎರಡು ದಿನಗಳ ಒಳಗೆ ಮುಗಿದಿತ್ತು. ಹೀಗಾಗಿ ಇಲ್ಲಿನ ಪಿಚ್‌ ಕೂಡ ಚರ್ಚೆಗೆ ಒಳಗಾಗಿದೆ.

2011ರಿಂದೀಚೆ ಇಂಗ್ಲೆಂಡ್‌, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಆಲ್ಲಿಂದೀಚೆಗೆ ಆಡಿದ 18 ಪಂದ್ಯಗಳಲ್ಲಿ 16 ಅನ್ನು ಸೋತಿದ್ದು, ಎರಡು ಡ್ರಾ ಆಗಿದ್ದವು.

ADVERTISEMENT

ವಿಕೆಟ್‌ ನಷ್ಟವಿಲ್ಲದೇ ನಾಲ್ಕು ರನ್‌ಗಳೊಡನೆ ಎರಡನೇ ದಿನ ಎರಡನೇ ಇನಿಂಗ್ಸ್‌ ಮುಂದುವರಿಸಿದ ಆಸ್ಟ್ರೇಲಿಯಾ ಲಂಚ್ ನಂತರ 10 ಓವರುಗಳ ಆಟದಲ್ಲಿ 132 ರನ್‌ಗಳಿಗೆ ಉರುಳಿತು. 42 ರನ್ ಮುನ್ನಡೆ ಬಿಟ್ಟುಕೊಟ್ಟಿದ್ದ ಇಂಗ್ಲೆಂಡ್‌ ಗೆಲುವಿಗೆ 175 ರನ್‌ಗಳ ಗುರಿ ನಿಗದಿಪಡಿಸಲಾಯಿತು.

ಆಕ್ರಮಣಕಾರಿಯಾಗಿ ಆಡಿದ ಇಂಗ್ಲೆಂಡ್ ನಾಲ್ಕು ವಿಕೆಟ್ ಉಳಿದಿರುವಂತೆ 32.2 ಓವರುಗಳಲ್ಲಿ 6 ವಿಕೆಟ್‌ಗೆ 178 ರನ್ ಬಾರಿಸಿ ಸಂಭ್ರಮಪಟ್ಟಿತು. ಸರಣಿ ಸೋಲಿನ ಅಂತರ 1–3ಕ್ಕೆ ಇಳಿಸಿತು. ಜೊತೆಗೆ ಮತ್ತೊಂದು ‘ವೈಟ್‌ವಾಷ್‌’ ಆತಂಕ ನಿವಾರಿಸಿತು.

ಈ ಟೆಸ್ಟ್‌ಗೆ ಮರಳಿ ಅವಕಾಶ ಪಡೆದ ಜೇಕಬ್ ಬೆಥೆಲ್ 46 ಎಸೆತಗಳಲ್ಲಿ 40 ರನ್ ಬಾರಿಸಿ ತಾವು ಉಪಯುಕ್ತ ಆಟಗಾರ ಎಂಬುದನ್ನು ತೋರಿಸಿಕೊಟ್ಟರು. ಅವರು ಔಟಾಗುವ ಮೂಲಕ ಈ ಪಂದ್ಯ ಅರ್ಧಶತಕವಿಲ್ಲದೇ ಕೊನೆಗೊಂಡಿತು. 1932ರ ನಂತರ ಮೊದಲ ಬಾರಿ ಈ ರೀತಿಯಾಗಿದೆ.

ಅವರ ನಿರ್ಗಮನವಾದಾಗ ಮೊತ್ತ 4 ವಿಕೆಟ್‌ಗೆ 137. ನಂತರ ಇಂಗ್ಲೆಂಡ್ ಮತ್ತೆರಡು ವಿಕೆಟ್‌ ಬೇಗನೇ ಕಳೆದುಕೊಂಡಿತು. ಅನುಭವಿ ಜೋ ರೂಟ್‌ ಅವರು ಜ್ಯೇ ರಿಚರ್ಡ್‌ಸನ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಗೆಲುವಿಗೆ 10 ರನ್ ಬೇಕಿದ್ದಾಗ ಸ್ಟೋಕ್ಸ್‌, ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. ಹ್ಯಾರಿ ಬ್ರೂಕ್ (ಔಟಾಗದೇ 18) ತಂಡ ಗುರಿತಲುಪಲು ನೆರವಾದರು.‌ ಇಂಗ್ಲೆಂಡ್ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.