ADVERTISEMENT

ENGvsWI | ಕೊರೊನೋತ್ತರ ಟೆಸ್ಟ್‌ನಲ್ಲಿ ಹೋಲ್ಡರ್‌ ಬಿರುಗಾಳಿ; ಕುಸಿದ ಇಂಗ್ಲೆಂಡ್

ಪಂಚಗುಚ್ಛ ಗಳಿಸಿದ ಮೊದಲ ಬೌಲರ್

ಏಜೆನ್ಸೀಸ್
Published 10 ಜುಲೈ 2020, 4:57 IST
Last Updated 10 ಜುಲೈ 2020, 4:57 IST
ಜೇಸನ್ ಹೋಲ್ಡರ್
ಜೇಸನ್ ಹೋಲ್ಡರ್   

ಸೌತಾಂಪ್ಟನ್: ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಗುರುವಾರ ’ಬಿರುಗಾಳಿ‘ ವೇಗದ ಬೌಲರ್‌ಗಳದ್ದೇ ಪಾರುಪತ್ಯ.

ವೆಸ್ಟ್ ಇಂಡೀಸ್‌ ತಂಡದ ವೇಗದ ಜೋಡಿ ಜೇಸನ್ ಹೋಲ್ಡರ್ ಮತ್ತು ಶಾನನ್ ಗ್ಯಾಬ್ರಿಯಲ್ ಅವರ ದಾಳಿಯ ಮುಂದೆ ಆತಿಥೇಯರು ಸಾಧಾರಣ ಮೊತ್ತಕ್ಕೆ ಕುಸಿದರು. ಸುಮಾರು ನಾಲ್ಕು ತಿಂಗಳುಗಳ ನಂತರ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೆಂಡ್‌ 67.3 ಓವರ್‌ಗಳಲ್ಲಿ 204 ರನ್‌ ಗಳಿಸಿತು. ಅದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ವಿಂಡೀಸ್‌ ವಿಕೆಟ್ ನಷ್ಟವಿಲ್ಲದೇ 21 ರನ್‌ ಗಳಿಸಿದೆ.

ವಿಂಡೀಸ್ ನಾಯಕ ಜೇಸನ್ ಹೋಲ್ಡರ್ (42ಕ್ಕೆ6) ಕೊರೊನೋತ್ತರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಪ್ರಥಮ ಬೌಲರ್ ಆದರು. ಚೆಂಡಿಗೆ ಎಂಜಲು ಲೇಪನ ಮಾಡದೆಯೂ ಅವರು ಸ್ವಿಂಗ್ ಅಸ್ತ್ರಗಳನ್ನು ಪ್ರಯೋಗಿಸಿದ್ದು ವಿಶೇಷವಾಗಿತ್ತು.

ADVERTISEMENT

ಮೊದಲ ದಿನವಾದ ಬುಧವಾರ ಮಳೆಯ ಆಟವೇ ಹೆಚ್ಚು ನಡೆದಿತ್ತು. ಕೇವಲ 106 ಎಸೆತಗಳು ಮಾತ್ರ ಪ್ರಯೋಗವಾಗಿದ್ದವು. ಆತಿಥೇಯ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡಿತ್ತು. ಆದರೆ ಎರಡನೇ ದಿನ ಜೇಸನ್ ಮತ್ತು ಶಾನನ್ ಅವರ ಆರ್ಭಟದ ಮುಂದೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್‌ 43 ರನ್‌ ಗಳಿಸಿದ್ದು, ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 67.3 ಓವರ್‌ಗಳಲ್ಲಿ 204 (ರೋರಿ ಬರ್ನ್ಸ್ 30, ಬೆನ್ ಸ್ಟೋಕ್ಸ್‌ 43, ಜೋಸ್ ಬಟ್ಲರ್ 35, ಡಾಮ್ ಬೆಸ್ ಔಟಾಗದೆ 31, ಶಾನನ್ ಗ್ಯಾಬ್ರಿಯಲ್ 62ಕ್ಕೆ4, ಜೇಸನ್ ಹೋಲ್ಡರ್ 42ಕ್ಕೆ6), ವೆಸ್ಟ್ ಇಂಡೀಸ್: 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 21 (ಜಾನ್ ಕ್ಯಾಂಪ್‌ಬೆಲ್ ಬ್ಯಾಟಿಂಗ್ 12, ಕ್ರೇಗ್ ಬ್ರಾಥ್‌ವೇಟ್ ಬ್ಯಾಟಿಂಗ್ 7) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.