ADVERTISEMENT

ರೋಹಿತ್ ರೀತಿ ಆಡಿದವರು ವಿರಳ: ಬ್ಯಾಟಿಂಗ್ ದಿಗ್ಗಜನಿಗೆ ಕಪಿಲ್ ದೇವ್ ಮೆಚ್ಚುಗೆ

ಪಿಟಿಐ
Published 8 ಮೇ 2025, 16:21 IST
Last Updated 8 ಮೇ 2025, 16:21 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

– ರಾಯಿಟರ್ಸ್ ಚಿತ್ರ

ನವದೆಹಲಿ: ದೇಶದಲ್ಲಿ ಕೆಲವೇ ಕೆಲವರು ರೋಹಿತ್ ಶರ್ಮಾ ಅವರ ಹಾಗೆ ಕ್ರಿಕೆಟ್ ಆಡಿದ್ದಾರೆ ಮತ್ತು ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದಾರೆ ಎಂದು ದಿಗ್ಗಜ ಆಲ್‌ರೌಂಡರ್ ಕಪಿಲ್‌ ದೇವ್‌ ಮೆಚ್ಚುಗೆ ಸೂಚಿಸಿದ್ದಾರೆ. ರೋಹಿತ್‌ ಅವರು ಟೆಸ್ಟ್‌ ಕ್ರಿಕೆಟ್‌ಗೆ ಬುಧವಾರ ವಿದಾಯ ಹೇಳಿದ್ದರು.

ADVERTISEMENT

‘ಅವರು ಅಮೋಘ ರೀತಿಯಲ್ಲಿ ಆಡಿದರು. ವರ್ಷಗಳಿಂದ ಅವರು ನಡೆದುಕೊಂಡು ಬಂದ ರೀತಿ, ನಾಯಕತ್ವ ನಿರ್ವಹಿಸಿದ ರೀತಿ, ಎಲ್ಲಕ್ಕಿಂತ ಮುಖ್ಯವಾಗಿ ಅವರು ಆಡುತ್ತಿದ್ದ ಪರಿ ಮೆಚ್ಚುವಂಥದ್ದು. ಭಾರತದಲ್ಲಿ ಕೆಲವೇ ಕೆಲವರು ಅವರ ಹಾಗೆ ಆಡಿದ್ದರು’ ಎಂದು ಕಪಿಲ್‌ ಗುರುವಾರ ಪಿಟಿಐ ವಿಡಿಯೋಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಂಬೈ ಕ್ರಿಕೆಟಿನಗ ಗುಣಗಾನ ಮಾಡಿದರು.

ಮುಂಬರುವ ದಿನಗಳಲ್ಲಿ ಭಾರತ ಟೆಸ್ಟ್‌ ತಂಡ ಮುನ್ನಡೆಸಲು ಉತ್ತಮ ಆಟಗಾರ ಯಾರು ಎಂಬ ಪ್ರಶ್ನೆಗೆ, ‘ನಾಯಕನನ್ನು ಆಯ್ಕೆ ಮಾಡುವುದು ಆಯ್ಕೆಗಾರರ ಕೆಲಸ’ ಎಂದು ಕಪಿಲ್ ದೇವ್ ಉತ್ತರಿಸಿದರು.

ರೋಹಿತ್ ಏಳಿಗೆ ಕೊಂಡಾಡಿದ ಸಚಿನ್

ರೋಹಿತ್ ಶರ್ಮಾ ಅವರಿಗೆ  2013ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಸರಣಿಯಲ್ಲಿ ಟೆಸ್ಟ್‌ ಕ್ಯಾಪ್‌ ನೀಡಿದ ಆಟಗಾರ ಬೇರಾರೂ ಅಲ್ಲ. ಅದು ಸಚಿನ್ ತೆಂಡೂಲ್ಕರ್‌. ಅದು ಸಚಿನ್ ಅವರ ವಿದಾಯದ ಸರಣಿಯೂ ಆಗಿತ್ತು.

ಸಚಿನ್ ಆ ಸಂದರ್ಭವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ನಲ್ಲಿ ಮೆಲುಕು ಹಾಕಿದ್ದಾರೆ. ‘ಈಡನ್‌ಗಾರ್ಡನ್‌ನಲ್ಲಿ 2013ರಲ್ಲಿ ನಿಮಗೆ ಟೆಸ್ಟ್‌ ಕ್ಯಾಪ್‌ ನೀಡಿದ ದಿನ ಇನ್ನೂ ನೆನಪಿದೆ. ಮೊನ್ನೆಯಷ್ಟೇ ವಾಂಖೆಡೆ ಕ್ರೀಡಾಂಗಣದ ಬಾಲ್ಕನಿಯಲ್ಲಿ ನಿಂತಿದ್ದೂ ಮರೆತಿಲ್ಲ. ನಿಮ್ಮ ಜೊತೆಗಿನ ಪಯಣ ಅಸಾಧಾರಣವಾದುದು’ ಎಂದು ಸಚಿನ್ ಬರೆದಿದ್ದಾರೆ.

‘ಅಂದಿನಿಂದ ನೀವು ಆಟಗಾರನಾಗಿ ಮತ್ತು ನಾಯಕನಾಗಿ ಭಾರತದ ಕ್ರಿಕೆಟ್‌ಗೆ ಒಳ್ಳೆಯ ಕೊಡುಗೆ ನೀಡಿದ್ದೀರಿ. ವೆಲ್‌ಡನ್‌. ನಿಮಗೆ ಮುಂದಿನ ದಿನಗಳು ಶುಭವಾಗಲಿ’ ಎಂದು ಸಚಿನ್ ಹಾರೈಸಿದ್ದಾರೆ.

‘ಡ್ರೆಸಿಂಗ್‌ ರೂಮ್‌ನಲ್ಲಿ ನಿಮ್ಮ ಉಪಸ್ಥಿತಿ ಮತ್ತು ನೀವು ಬೀರಿದ ಪ್ರಭಾವ ಎಂದೆಂದೂ ಪ್ರತಿಧ್ವನಿಸಲಿದೆ’ ಎಂದು ರಿಷಭ್ ಪಂತ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ರೋಹಿತ್ ನಾಯಕರಾಗಿದ್ದಾಗ, ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಧ್ರುವ್ ಜುರೇಲ್ ಅವರು ‘ನೀವು ಎಂದೆಂದೂ ನನ್ನ ಮೊದಲ ನಾಯಕ’ ಎಂದು ಭಾವುಕರಾಗಿ ಬರೆದಿದ್ದಾರೆ. ರೋಹಿತ್‌ ಅವರು ತಮ್ಮ ಪಾಲಿನ ವರದಾನ ಎಂದಿದ್ದಾರೆ ಇನ್ನೊಬ್ಬ ಯುವ ಆಟಗಾರ ಯಶಸ್ವಿ ಜೈಸ್ವಾಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.