ADVERTISEMENT

ತುಂಬಾ ಬೇಸರವಾದಾಗ ಹೀಗೆ ಮಾಡ್ತಾರಂತೆ ಸ್ಮೃತಿ ಮಂದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 6:47 IST
Last Updated 9 ಡಿಸೆಂಬರ್ 2025, 6:47 IST
   

ಮುಂಬೈ: ಗಾಯಕ ಪಲಾಶ್ ಮುಚ್ಚಲ್‌ ಜೊತೆ ಮದುವೆ ಮುರಿದು ಬಿದ್ದ ನಂತರ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಕ್ರಿಕೆಟ್‌ ಅಭ್ಯಾಸಕ್ಕೆ ಮರಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಅವರು ತಯಾರಿ ನಡೆಸುತ್ತಿದ್ದಾರೆ.

ಇದೇ ವೇಳೆ ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಮನಸ್ಸಿಗೆ ತುಂಬಾ ಬೇಸರವಾದಾಗ, ನಿರುತ್ಸಾಹಗೊಂಡಾಗ ಅದರಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ಅವರು ಅದರಲ್ಲಿ ಮಾತನಾಡಿದ್ದಾರೆ. ಈ ಸಂದರ್ಶನವನ್ನು ‘ಹ್ಯೂಮನ್ಸ್ ಆಫ್ ಬಾಂಬೆ’ ಯೂಟ್ಯೂಬ್ ಚಾನೆಲ್‌ ನಡೆಸಿತ್ತು.

ಜೀವನದಲ್ಲಿ ಎದುರಾಗುವ ಕಠಿಣ ಸಂದರ್ಭಗಳ ಬಗ್ಗೆ ಮಾತನಾಡಿದ್ದ ಸ್ಮೃತಿ, ‘ಅಂತಹ ಸಂದರ್ಭಗಳಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಇದೆಲ್ಲಾ ನನಗೆ ತುಂಬಾ ಸುಲಭ. ನಾನು ಯಾವಾಗಲೂ ಅಲ್ಪಾವಧಿಯ ಗುರಿಗಳನ್ನು ಇಟ್ಟುಕೊಳ್ಳುತ್ತೇನೆ. ಇಂದು ನಾನು ನಿರುತ್ಸಾಹಗೊಂಡರೆ, ಮುಂದಿನ ಆರೇಳು ದಿನಗಳವರೆಗೆ ನನ್ನ ಬ್ಯಾಟಿಂಗ್‌ನಲ್ಲಿ ಅಥವಾ ಫಿಟ್‌ನೆಸ್‌ನಲ್ಲಿ ಏನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಬರೆದಿಟ್ಟುಕೊಳ್ಳುತ್ತೇನೆ’ ಎಂದು ಹೇಳಿದದ್ದಾರೆ.

‘ಯಾವಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇನೋ ಆಗ ಉಳಿದೆಲ್ಲವನ್ನು ಮರೆಯುತ್ತೇನೆ. ನಾನು ಏನು ಮಾಡಬೇಕೋ ಅದರ ಬಗ್ಗೆ ಮಾತ್ರ ನನ್ನ ಗಮನವಿರುತ್ತದೆ. ಆ ಸಂದರ್ಭದಲ್ಲಿಯೇ ನಾನು ಸಾಧಿಸಬೇಕಾಗಿರುವುದು ಎಷ್ಟೆಲ್ಲಾ ಇದೆ ಎಂಬುದು ನನ್ನ ಅರಿವಿಗೆ ಬರುತ್ತದೆ’ ಎಂದು ಹೇಳಿದ್ದಾರೆ.

‘ಪ್ರತಿ ದಿನವನ್ನು ನಾವು ಹೊಸದಾಗಿ ಪ್ರಾರಂಭಿಸಬೇಕು. ಕಳೆದ ಪಂದ್ಯದಲ್ಲಿ ನಾನು ಶತಕ ಗಳಿಸಿದರೂ ಹೊಸ ಪಂದ್ಯದಲ್ಲಿ ಇನಿಂಗ್ಸ್‌ ಅನ್ನು ಶೂನ್ಯದಿಂದಲೇ ಪ್ರಾರಂಭಿಸಬೇಕು’ ಎಂದು ಅವರು ಹೇಳಿದ್ದಾರೆ.

‘ನನ್ನ ಜೀವನಾನುಭವದಿಂದ ನಾನು ಕಲಿತ ದೊಡ್ಡ ಪಾಠವೆನೆಂದರೆ, ಜೀವನದಲ್ಲಿ ಏನೇ ನಡೆದರೂ, ಮರುದಿನ ನಮಗೆ ಹೊಸ ದಿನವಾಗಿರುತ್ತದೆ’ ಎಂದಿದ್ದಾರೆ.

ನವೆಂಬರ್ 23ರಂದು ಪಲಾಶ್ ಮುಚ್ಚಲ್‌ ಅವರೊಂದಿಗೆ ನಿಶ್ಚಯವಾಗಿದ್ದ ಮದುವೆಯು ಕಾರಣಾಂತರಗಳಿಂದ ರದ್ದಾಗಿತ್ತು. ಮದುವೆ ರದ್ದಾಗಿರುವ ಬಗ್ಗೆ ಸ್ವತಃ ಸ್ಮೃತಿ ಅವರೇ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭವಿಷ್ಯದ ಸಾಧನೆಗಳ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.

ಅದಾಗ್ಯೂ, ಮದುವೆ ರದ್ಧತಿಗೆ ನಿಖರ ಕಾರಣವನ್ನು ಎರಡು ಕುಟುಂಬಗಳು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.