ADVERTISEMENT

ಭಾರತದ ಗೆಲುವಿನ ಓಟಕ್ಕೆ ಬ್ರೇಕ್; ರೋಹಿತ್ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ

ಏಜೆನ್ಸೀಸ್
Published 8 ಡಿಸೆಂಬರ್ 2020, 14:49 IST
Last Updated 8 ಡಿಸೆಂಬರ್ 2020, 14:49 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಸಿಡ್ನಿ: ಮಂಗಳವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಸ್‌ಸಿಜಿ) ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಿದೆ. ಇದರೊಂದಿಗೆ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಇನ್ನೊಂದೆಡೆ ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25ನೇ ಅರ್ಧಶತಕ ದಾಖಲಿಸಿರುವ ನಾಯಕ ವಿರಾಟ್ ಕೊಹ್ಲಿ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್, ಎಡಗೈ ಆರಂಭಿಕ ಮ್ಯಾಥ್ಯೂ ವೇಡ್ (80) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (54) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 186 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ (85) ಹೊರತಾಗಿ ಇತರೆ ಯಾವ ಬ್ಯಾಟ್ಸ್‌ಮನ್ ಹೋರಾಟದ ಮನೋಭಾವ ತೋರಲೇ ಇಲ್ಲ. 61 ಎಸೆತಗಳನ್ನು ಎದುರಿಸಿದ ಕೊಹ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 85 ರನ್ ಗಳಿಸಿದರು.

ಅಂತಿಮವಾಗಿ ಟೀಮ್ ಇಂಡಿಯಾ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 12 ರನ್ ಅಂತರದ ಸೋಲಿಗೆ ಶರಣಾಗಿದೆ. ಇದರೊಂದಿಗೆ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

ಟಿ20 ಮಾದರಿಯಲ್ಲಿ ಸತತ 10ನೇ ಗೆಲುವು ದಾಖಲಿಸುವ ಟೀಮ್ ಇಂಡಿಯಾ ಕನಸು ಭಗ್ನಗೊಂಡಿದೆ. ಹಾಗೆಯೇ ಕಳೆದ 12 ಟಿ20 ಪಂದ್ಯಗಳಲ್ಲಿ ಮೊದಲ ಬಾರಿಗೆ ಸೋಲನ್ನು ಅನುಭವಿಸಿದೆ. ಭಾರತ ಕೊನೆಯದಾಗಿ 2019ನೇ ಇಸವಿಯಲ್ಲಿ ತಿರುವನಂತಪುರದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸೋಲನ್ನು ಕಂಡಿತ್ತು.

ವಿದೇಶ ನೆಲದಲ್ಲಿ ಕಳೆದ 11 ಪಂದ್ಯಗಳಲ್ಲಿ ಎದುರಾದ ಮೊದಲ ಸೋಲು ಇದಾಗಿದೆ. ಈ ಹಿಂದೆ 2019ನೇ ಇಸವಿಯಲ್ಲಿ ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತ್ತು.

ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿ
ಏತನ್ಮಧ್ಯೆ ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಇದು ವಿರಾಟ್ ಬ್ಯಾಟ್‌ನಿಂದ ಸಿಡಿದ 25ನೇ ಅರ್ಧಶತಕವಾಗಿದೆ. ಅಲ್ಲದೆ 79 ಇನ್ನಿಂಗ್ಸ್‌ಗಳಲ್ಲೇ ಈ ಮೈಲುಗಲ್ಲು ತಲುಪಿದ್ದಾರೆ. ಇನ್ನೊಂದೆಡೆ ರೋಹಿತ್ ಶರ್ಮಾ 100 ಇನ್ನಿಂಗ್ಸ್‌ಗಳಲ್ಲಿ ಇದೇ ಸಾಧನೆ ಮಾಡಿದ್ದರು.

ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಂತಿದೆ (T20I):
1. ವಿರಾಟ್ ಕೊಹ್ಲಿ(ಭಾರತ); 25 (79 ಇನ್ನಿಂಗ್ಸ್)
2. ರೋಹಿತ್ ಶರ್ಮಾ (ಭಾರತ); 25 (100 ಇನ್ನಿಂಗ್ಸ್)
3. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ); 19 (81 ಇನ್ನಿಂಗ್ಸ್)
4. ಪೌಲ್ ಸ್ಟಿರ್ಲಿಂಗ್ (ಐರ್ಲೆಂಡ್); 18 (77 ಇನ್ನಿಂಗ್ಸ್)
5. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್); 17 (87 ಇನ್ನಿಂಗ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.