ಕ್ರಿಕೆಟ್
(ಸಾಂಕೇತಿಕ ಚಿತ್ರ)
ಲಂಡನ್: ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಆ್ಯಂಡ್ರೂ ಫ್ಲಿಂಟಾಫ್ ಅವರ ಪುತ್ರ ರಾಕಿ ಮತ್ತು ಫಿಟ್ನೆಸ್ ಮರಳಿ ಪಡೆದ ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರು ಭಾರತ ‘ಎ’ ತಂಡದ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯಗಳ ಸರಣಿ ಆಡಲಿರುವ ಇಂಗ್ಲೆಂಡ್ ಲಯನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮೊದಲ ಪಂದ್ಯ ಕ್ಯಾಂಟರ್‌ಬರಿಯಲ್ಲಿ ಮೇ 30ರಂದು ಆರಂಭವಾಗಲಿದೆ. ಎರಡನೇ ಪಂದ್ಯ ನಾರ್ತಾಂಪ್ಟನ್‌ನಲ್ಲಿ ಜೂನ್ 6 ರಿಂದ ನಡೆಯಲಿದೆ. ಈ ಪಂದ್ಯಗಳು, ಭಾರತ– ಇಂಗ್ಲೆಂಡ್ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ನಡೆಯಲಿದೆ.
ಇಂಗ್ಲೆಂಡ್ ಪರ ಮೂರೂ ಮಾದರಿಗಳಲ್ಲಿ ಆಡಿರುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರ ಜೊತೆಗೆ ಸೋದರ, ಆಫ್ ಸ್ಪಿನ್ನರ್ ಫರ್ಹಾನ್ ಅವರೂ ಸ್ಥಾನ ಪಡೆದಿದ್ದಾರೆ.
ಭಾರತ ವಿರುದ್ಧ ಐದು ಟೆಸ್ಟ್‌ಗಳ ಸರಣಿ ಜೂನ್ 20ರಂದು ಆರಂಭವಾಗಲಿದ್ದು, ಅದಕ್ಕೆ ಮೊದಲು ಲಯಕ್ಕೆ ಮರಳಲು ಈ ಸರಣಿ ಅನುಭವಿ ಕ್ರಿಸ್ ವೋಕ್ಸ್ ಅವರಿಗೆ ನೆರವಾಗಲಿದೆ.
15 ಆಟಗಾರರ ತಂಡ: ಜೇಮ್ಸ್ ರಿವ್ (ನಾಯಕ), ಫರ್ಹಾನ್ ಅಹ್ಮದ್, ರೆಹಾನ್ ಅಹ್ಮದ್, ಸೋನಿ ಬೇಕರ್, ಜೋರ್ಡಾನ್ ಕಾಕ್ಸ್, ರಾಕಿ ಫ್ಲಿಂಟಾಫ್, ಎಮಿಲಿಯೊ ಗೆ, ಟಾಮ್ ಹೇನ್ಸ್, ಜಾರ್ಜ್ ಹಿಲ್, ಜೋಶ್ ಹಲ್, ಎಡಿ ಜಾಕ್, ಬೆನ್ ಮೆಕಿನ್ಲೆ, ಡಾನ್ ಮೌಸ್ಲಿ, ಅಜಿತ್ ಸಿಂಗ್ ಡೇಲ್, ಕ್ರಿಸ್ ವೋಕ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.