ADVERTISEMENT

IPL 2025 | ರಾಯಲ್ಸ್‌ಗೆ ಇಂದು ಕಿಂಗ್ಸ್‌ ಸವಾಲು: ಲಯಕ್ಕೆ ಮರಳುವರೇ ಜೈಸ್ವಾಲ್‌?

ಪಿಟಿಐ
Published 4 ಏಪ್ರಿಲ್ 2025, 23:30 IST
Last Updated 4 ಏಪ್ರಿಲ್ 2025, 23:30 IST
ಯಶಸ್ವಿ ಜೈಸ್ವಾಲ್ 
ಪಿಟಿಐ ಚಿತ್ರ
ಯಶಸ್ವಿ ಜೈಸ್ವಾಲ್ ಪಿಟಿಐ ಚಿತ್ರ   

ಮುಲ್ಲನಪುರ: ಭಾರತ ತಂಡದ ಆಟಗಾರ ಯಶಸ್ವಿ ಜೈಸ್ವಾಲ್ ಈ ಬಾರಿಯ ಐಪಿಎಲ್‌ನಲ್ಲಿ ಇನ್ನೂ ಲಯ ಕಂಡುಕೊಂಡಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆರಂಭ ಮಾಡಿರುವ ಪಂಜಾಬ್ ಕಿಂಗ್ಸ್‌ ತಂಡವನ್ನು ಶನಿವಾರ ಎದುರಿಸಲಿರುವ ರಾಜಸ್ಥಾನ ರಾಯಲ್ಸ್ ತಂಡ, ಈ ಪಂದ್ಯದಲ್ಲಿ ಎಡಗೈ ಬ್ಯಾಟರ್‌ ಜೈಸ್ವಾಲ್ ಅವರು ಮಿಂಚುವರೆಂಬ ವಿಶ್ವಾಸದಲ್ಲಿದೆ.

ಮೂರು ಪಂದ್ಯಗಳ ಬಳಿಕ ಸಂಜು ಸ್ಯಾಮ್ಸನ್ ಅವರು ಮರಳಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅವರಿಗೆ ಕೀಪಿಂಗ್ ಮಾಡಲು ಎನ್‌ಸಿಎ ತಜ್ಞರ ತಂಡ ಇತ್ತೀಚೆಗೆ ಅನುಮತಿ ನೀಡಿದೆ. ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್ ಪರಾಗ್ ನಾಯಕತ್ವ ವಹಿಸಿದ್ದರು. ಧ್ರುವ ಜುರೇಲ್ ಕೀಪಿಂಗ್ ಕೆಲಸ ಮಾಡಿದ್ದರು.

ಕೊಹ್ಲಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಜೈಸ್ವಾಲ್, ಇತ್ತೀಚೆಗಷ್ಟೇ ಮುಂಬೈ ತಂಡ ತೊರೆದು ಗೋವಾಕ್ಕೆ ಆಡಲು ನಿರ್ಧರಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

ಫೆಬ್ರುವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ನಂತರ ಅವರು ಯಾವುದೇ ಪಂದ್ಯಗಳಲ್ಲಿ ಆಡಿಲ್ಲದಿರುವುದು ಅವರ ಪರದಾಟಕ್ಕೆ ಕಾರಣ ಇರಬಹುದು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಹಾಲಿ ಐಪಿಎಲ್‌ನಲ್ಲಿ ಜೈಸ್ವಾಲ್ ಗಳಿಸಿದ ಸ್ಕೋರ್‌ 1, 29 ಮತ್ತು 4.

ಇನ್ನೊಂದೆಡೆ ಪ್ರಬಲ ಪಂಜಾಬ್ ತಂಡ ಅನುಭವಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅಯ್ಯರ್ ಬೆನ್ನುಬೆನ್ನಿಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಪವರ್‌ ಹಿಟ್ಟಿಂಗ್ ಸುಧಾರಿಸಿದೆ ಎಂಬುದನ್ನು ಅಂಕಿಅಂಶಗಳೇ ಬೊಟ್ಟುಮಾಡುತ್ತವೆ. ಹೋದ ವರ್ಷದ ಐಪಿಎಲ್‌ನ 16 ಪಂದ್ಯಗಳಲ್ಲಿ ಅವರು 13 ಸಿಕ್ಸರ್ ಬಾರಿಸಿದ್ದರು. ಈ ಬಾರಿ ಅವರು ಈಗಾಗಲೇ ಅದನ್ನು ಸರಿಗಟ್ಟಿದ್ದಾರೆ.  ಕ್ಷೇತ್ರರಕ್ಷಣೆ ನಿಯೋಜನೆ, ಬೌಲಿಂಗ್‌ ಬದಲಾವಣೆಯಲ್ಲೂ ಜಾಣ್ಮೆ ಮೆರೆದಿದ್ದು, ನಾಯಕತ್ವದಲ್ಲೂ ಸೈ ಎನಿಸಿದ್ದಾರೆ.

ರಾಯಲ್ಸ್ ಬೌಲಿಂಗ್ ಎದುರಾಳಿಗಳಿಗೆ ಭಯಹುಟ್ಟಿಸುವ ರೀತಿಯಲ್ಲಿಲ್ಲ. ಜೋಫ್ರಾ ಆರ್ಚರ್‌, ಮಹೀಶ ತೀಕ್ಷಣ, ಸಂದೀಪ್‌ ಶರ್ಮಾ, ಹಸರಂಗ ಮತ್ತು ತುಷಾರ ದೇಶಪಾಂಡೆ ಅವರು ಸ್ಥಿರ ಪ್ರದರ್ಶನ ನೀಡಿಲ್ಲ.

ಸಂಜು ನಾಯಕತ್ವಕ್ಕೆ ಮರಳಿರುವುದು ರಾಯಲ್ಸ್‌ ಬಲ ಹೆಚ್ಚಿಸಲಿದೆ. ಆದರೆ ಜೈಸ್ವಾಲ್ ಮತ್ತು ಧ್ರುವ್ ಜುರೇಲ್ ಲಯಕ್ಕೆ ಮರಳಿದರೆ ಒಳ್ಳೆಯ ಮೊತ್ತ ಪೇರಿಸಬಹುದು. ವಿಂಡೀಸ್‌ನ ಪವರ್‌ಹಿಟ್ಟರ್ ಹೆಟ್ಮೆಯರ್ ಅವರ ಪಾತ್ರವೂ ನಿರ್ಣಾಯಕ.

ರಾತ್ರಿ 7.30.

ಶ್ರೇಯಸ್ ಅಯ್ಯರ್ ಎಎಫ್‌ಪಿ ಚಿತ್ರ
ಶ್ರೇಯಸ್ ಅಯ್ಯರ್ ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.