ADVERTISEMENT

IPL 2025 | CSK vs RR: ತಳದಲ್ಲಿರುವ ತಂಡಗಳ ಮುಖಾಮುಖಿ

ಪಿಟಿಐ
Published 19 ಮೇ 2025, 23:30 IST
Last Updated 19 ಮೇ 2025, 23:30 IST
   

ನವದೆಹಲಿ: ಪಾಯಿಂಟ್ಸ್‌ ಪಟ್ಟಿಯ ತಳದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಮಂಗಳವಾರ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಏನೂ ಮಹತ್ವ ಪಡೆದಿಲ್ಲ ನಿಜ; ಆದರೆ ಸಿಎಸ್‌ಕೆಯು ಯುವ ತಂಡವನ್ನು ಕಟ್ಟುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ನೀಡಿದೆ.

ರಾಯಲ್ಸ್ ತಂಡಕ್ಕೆ ಮಂಗಳವಾರದ ಪಂದ್ಯ ಈ ಸಾಲಿನ ಕೊನೆಯದ್ದು. ಈ ತಂಡಕ್ಕೆ ವೈಭವ್ ಸೂರ್ಯವಂಶಿ ರೂಪದಲ್ಲಿ ಬೀಸಾಟವಾಡುವ ನಿರ್ಭೀತ ಆಟಗಾರ ದೊರೆತಿದ್ದು ಬಿಟ್ಟರೆ ಹಾಲಿ ಋತುವಿನಲ್ಲಿ ಸಂಭ್ರಮಪಡುವಂಥ ವಿಷಯ ಏನೂ ಇರಲಿಲ್ಲ. ಮೆಗಾ ಹರಾಜಿನಲ್ಲಿ ಬೌಲರ್‌ಗಳ ಆಯ್ಕೆಯಲ್ಲೂ ತಂಡ ಎಡವಿತ್ತು. 10 ತಂಡಗಳ ಲೀಗ್‌ನಲ್ಲಿ ಸದ್ಯ ಒಂಬತ್ತನೆ ಸ್ಥಾನದಲ್ಲಿದೆ. ಬೌಲರ್‌ಗಳ ಸಾಧಾರಣ ಪ್ರದರ್ಶನ ನೀಡಿದರೆ, ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮಿಂಚಿದ್ದಾರೆ.

ಜೋಸ್‌ ಬಟ್ಲರ್‌ ಅವರನ್ನು ಕೈಬಿಟ್ಟಿದ್ದು ದುಬಾರಿಯಾಯಿತು. ಆರ್ಚರ್‌ ಭರವಸೆಗೆ ತಕ್ಕಂತೆ ಬೌಲಿಂಗ್ ಮಾಡಲಿಲ್ಲ. ಭಾರತದ ಪ್ರಮುಖ ಬೌಲರ್‌ಗಳನ್ನು ಆಯ್ಕೆ ಮಾಡದ ಪರಿಣಾಮ ಎದುರಿಸಿತು.

ADVERTISEMENT

ಆರಂಭದಲ್ಲಿ ತಳಕ್ಕೆ ಸರಿದಿದ್ದ ಮುಂಬೈ ಇಂಡಿಯನ್ಸ್‌ ಹಣೆಬರಹವನ್ನು ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ ಮತ್ತು ಟ್ರೆಂಟ್‌ ಬೌಲ್ಡ್‌ ಬದಲಿಸಿದರು. ಸಿರಾಜ್ ಮತ್ತು ಪ್ರಸಿದ್ಧಕೃಷ್ಣ ಗುಜರಾತ್‌ ಟೈಟನ್ಸ್‌ ಕೈಹಿಡಿದರು. 30 ವಿಕೆಟ್‌ಗಳನ್ನು ತಮ್ಮೊಳಗೆ ಪಡೆದರು. ರಾಯಲ್ಸ್‌ಗೆ ಇಂಥ ಯಾವುದೇ ಅವಕಾಶ ಇರಲಿಲ್ಲ. ಎದುರಾಳಿಗೆ ಆತಂಕ ಮೂಡಿಸುವಂಥ ಒಬ್ಬ ಬೌಲರ್‌ ಸಹ ತಂಡದಲ್ಲಿರಲಿಲ್ಲ.

ಅನುಭವಿ ಆಟಗಾರರಿಗೆ ಅವಕಾಶ ನೀಡಿದ ಚೆನ್ನೈ ಅದು ಫಲ ನೀಡುತ್ತಿಲ್ಲವೆಂದು ತಿಳಿದ ನಂತರ ಕೊನೆಯ ಹಂತದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತಿದೆ. ರಾಹುಲ್ ತ್ರಿಪಾಠಿ, ದೀಪಕ್ ಹೂಡ ನಿರಾಸೆ ಮೂಡಿಸಿದರು. ಆದರೆ ಕೊನೆಯ ಕೆಲವು ಪಂದ್ಯಗಳಿಂದ ಶೇಖ್ ರಶೀದ್‌, ಆಯುಷ್‌ ಮ್ಹಾತ್ರೆ ಮತ್ತು ಉರ್ವಿಲ್‌ ಪಟೇಲ್‌ ಅವರಿಗೆ ಅವಕಾಶ ಕೊಟ್ಟು ನೀಡಿದೆ. ಈ ಆಟಗಾರರೂ ನಿರಾಸೆ ಮೂಡಿಸಿಲ್ಲ. ಮ್ಹಾತ್ರೆ, ಆರ್‌ಸಿಬಿ ವಿರುದ್ಧ ಶತಕ ತಪ್ಪಿಸಿಕೊಂಡಿದ್ದರು. ಸನ್‌ರೈಸರ್ಸ್ ಮತ್ತು ಮುಂಬೈ ವಿರುದ್ಧವೂ ಚೆನ್ನಾಗಿ ಆಡಿದ್ದಾರೆ. ಪಟೇಲ್‌, ಕೆಕೆಆರ್‌ ವಿರುದ್ಧ ಮಿಂಚಿನ ಆಟವಾಡಿದ್ದಾರೆ. ನಾಯಕ ಋತುರಾಜ್ ಗಾಯಾಳಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು.

ಧೋನಿ ಬಳಗದ ವಿದೇಶಿ ಬ್ಯಾಟರ್‌ಗಳಾದ ರಚಿನ್ ರವೀಂದ್ರ ಮತ್ತು ಡವಾನ್ ಕಾನ್ವೆ ರನ್ ಬರ ಎದುರಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.