ADVERTISEMENT

Champions Trophy | ನಿವೃತ್ತಿ, ಭವಿಷ್ಯದ ಕುರಿತು ರೋಹಿತ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2025, 14:05 IST
Last Updated 5 ಫೆಬ್ರುವರಿ 2025, 14:05 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಚಿತ್ರ ಕೃಪೆ: X/@BCCI)

ನಾಗ್ಪುರ: ಅಂತರರಾಷ್ಟ್ರೀಯ ಕ್ರಿಕೆಟ್‌‌‌ಗೆ ನಿವೃತ್ತಿ ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ವರದಿಗಳನ್ನು ತಳ್ಳಿ ಹಾಕಿರುವ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೇಲೆ ಗಮನ ಕೇಂದ್ರಿಕರಿಸಿರುವುದಾಗಿ ತಿಳಿಸಿದ್ದಾರೆ.

ADVERTISEMENT

'ನನ್ನ ಮುಂದೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಚಾಂಪಿಯನ್ಸ್ ಟ್ರೋಫಿ ಇರುವಾಗ ಈ ಸಂದರ್ಭದಲ್ಲಿ ವೃತ್ತಿ ಜೀವನದ ಭವಿಷ್ಯದ ಯೋಜನೆಯ ಕುರಿತು ಚರ್ಚಿಸುವುದು ಅಪ್ರಸ್ತುತವೆನಿಸುತ್ತದೆ. ನನ್ನ ಭವಿಷ್ಯದ ಕುರಿತು ಹಲವಾರು ವರ್ಷಗಳಿಂದ ವರದಿಗಳು ಬರುತ್ತಲೇ ಇವೆ. ಆ ವರದಿಗಳ ಕುರಿತು ಸ್ಪಷ್ಟನೆ ನೀಡುವುದು ನನ್ನ ಕೆಲಸವಲ್ಲ' ಎಂದು ಹೇಳಿದ್ದಾರೆ.

'ನನ್ನ ಪಾಲಿಗೆ ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಅತ್ಯಂತ ಮುಖ್ಯವೆನಿಸಿದೆ. ಈ ಪಂದ್ಯಗಳ ಮೇಲೆ ಗಮನ ನೆಟ್ಟಿದ್ದೇನೆ. ಅಲ್ಲಿಂದ ಮುಂದೆ ಏನಾಗುತ್ತದೆ ನೋಡೋಣ' ಎಂದು ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಐದು ಇನಿಂಗ್ಸ್‌ಗಳಲ್ಲಿ 6.20ರ ಸರಾಸರಿಯಲ್ಲಿ 31 ರನ್ ಮಾತ್ರ ಗಳಿಸಿದ್ದರು.

ಈ ಕುರಿತು ಕೇಳಿದಾಗ, 'ಇದು ಸಂಪೂರ್ಣ ವಿಭಿನ್ನ ಆಟವಾಗಿದೆ. ಕ್ರಿಕೆಟಿಗನಾಗಿ ಏರಿಳಿತ ಕಾಣುವುದು ಸಹಜ. ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇದು ನನಗೆ ಹೊಸತೇನಲ್ಲ. ಪ್ರತಿ ಸರಣಿಯೂ ಹೊಸ ಅವಕಾಶವಾಗಿದೆ ಎಂಬುದನ್ನು ಅರಿತುಕೊಂಡಿದ್ದೇವೆ. ಸವಾಲುಗಳನ್ನು ಎದುರಿಸಲು ನಾನು ಸಿದ್ಧವಾಗಿದ್ದೇನೆ. ಹಿಂದೆ ಏನಾಯಿತು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದಿನ ಸರಣಿಯತ್ತ ಗಮನ ಕೇಂದ್ರಿಕರಿಸುವುದು ಮುಖ್ಯವೆನಿಸುತ್ತದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.

'ನಾವು ನಿರ್ದಿಷ್ಟ ಶೈಲಿಯ ಕ್ರಿಕೆಟ್ ಆಡಲು ಬಯಸುತ್ತೇವೆ. ಕಳೆದ ಏಕದಿನ ವಿಶ್ವಕಪ್‌ನ ಶೈಲಿಯ ಆಟವನ್ನು ಪುನರಾವರ್ತಿಸಲು ಬಯಸುತ್ತೇವೆ. ಈ ಸರಣಿಗೆ ಏನು ಬೇಕು ಅದಕ್ಕೆ ತಕ್ಕಂತೆ ಆಡಲು ಬಯಸುತ್ತೇವೆ. ಎಲ್ಲ ಆಟಗಾರರಿಗೂ ತಮ್ಮ ಜವಾಬ್ದಾರಿ ಬಗ್ಗೆ ಸ್ಪಷ್ಟ ಅರಿವಿದೆ' ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ದದ ಏಕದಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ಫೆ.6ರಂದು (ನಾಳೆ) ಆರಂಭವಾಗಲಿದೆ.

ಪಾಕಿಸ್ತಾನದ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ, ಫೆಬ್ರುವರಿ 19ರಂದು ಆರಂಭವಾಗಲಿದೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.