ADVERTISEMENT

ಸೆಲ್ಫಿಗಾಗಿ ಮೈದಾನಕ್ಕೆ ನುಗ್ಗಿ ರೊನಾಲ್ಡೊ ಕೆಂಗಣ್ಣಿಗೆ ಗುರಿಯಾದ ಅಭಿಮಾನಿ

ಯುರೋಪಿಯನ್‌ ಚಾಂಪಿಯನ್ಸ್ ಲೀಗ್

ಏಜೆನ್ಸೀಸ್
Published 12 ಡಿಸೆಂಬರ್ 2019, 11:07 IST
Last Updated 12 ಡಿಸೆಂಬರ್ 2019, 11:07 IST
   

ಲೆವೆರ್‌ಕುಸೆನ್‌ (ಜರ್ಮನಿ):ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕೆಂಗಣ್ಣಿಗೆ ಗುರಿಯಾದ ಪ್ರಸಂಗ ಯುರೋಪಿಯನ್‌ ಚಾಂಪಿಯನ್ಸ್‌ ಲೀಗ್‌ನ (ಯುಸಿಎಲ್‌) ಯುವೆಂಟಸ್–ಬೆಯರ್‌ ಪಂದ್ಯದಲ್ಲಿ ನಡೆಯಿತು.

ಇಲ್ಲಿನ ಬೇ ಅರೇನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಮುಕ್ತಾಯದ ಬಳಿಕಯುವೆಂಟಸ್ ತಂಡದ ರೊನಾಲ್ಡೊ ಸಹ ಆಟಗಾರರನ್ನು ಅಭಿನಂದಿಸುತ್ತಿದ್ದರು. ಈ ವೇಳೆ ರಕ್ಷಣಾ ಸಿಬ್ಬಂದಿ ಕಣ್ತಪ್ಪಿಸಿ ಅಂಗಳಕ್ಕೆ ನುಗ್ಗಿದ ಅಭಿಮಾನಿ, ರೊನಾಲ್ಡೊ ಅವರತ್ತ ಧಾವಿಸಿದರು. ಬಳಿಕ ರೊನಾಲ್ಡೊ ಕುತ್ತಿಗೆಯ ಹತ್ತಿರ (ಭುಜದ ಮೇಲೆ) ಕೈ ಇಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಹಿಂದಿನಿಂದ ಬಂದ ಸಿಬ್ಬಂದಿ, ಅಭಿಮಾನಿಯನ್ನು ಎಳೆದೊಯ್ಯಲು ಪ್ರಯತ್ನಿಸಿದರು.

ಆತ (ಅಭಿಮಾನಿ) ರೊನಾಲ್ಡೊ ಅವರನ್ನು ಬಿಗಿಯಾಗಿ ಹಿಡಿದಿದ್ದರಿಂದ, ರಕ್ಷಣಾ ಸಿಬ್ಬಂದಿ ಎಳೆದ ರಭಸಕ್ಕೆ ರೊನಾಲ್ಡೊ ಕೂಡ ಮುಂದಕ್ಕೆ ಮುಗ್ಗರಿಸಿದರು. ಕ್ಷಣಮಾತ್ರದಲ್ಲಿ ನಡೆದ ಈ ಘಟನೆಯಿಂದ ಕಕ್ಕಾಬಿಕ್ಕಿಯಾದ ರೊನಾಲ್ಡೊ ಅಭಿಮಾನಿಯತ್ತ ಕೆಂಗಣ್ಣ ಬೀರಿದರು. ಈ ವಿಡಿಯೊ ಇದೀಗ ವೈರಲ್‌ ಆಗಿದೆ.

ಈ ಘಟನೆಗೂ ಮೊದಲು ಅಂಗಳಕ್ಕೆ ನುಗ್ಗಿದ್ದ ಇಬ್ಬರು ಅಭಿಮಾನಿಗಳನ್ನು ಆತ್ಮೀಯವಾಗಿ ಅಪ್ಪಿಕೊಂಡು ಕಳುಹಿಸಿದ್ದರು.

ಪಂದ್ಯದಲ್ಲಿ ರೊನಾಲ್ಡೊ ಹಾಗೂ ಗೊಂಜಾಲೆ ಹಿಗುವಾಯ್ನ್‌ ತಲಾ ಒಂದೊಂದು ಗೋಲು ಬಾರಿಸಿದರು. ಹೀಗಾಗಿಯುವೆಂಟಸ್ ತಂಡಬೆಯರ್‌ ವಿರುದ್ಧ 2–0 ಅಂತರದಲ್ಲಿ ಗೆಲುವು ಸಾಧಿಸಿತು.ಯುಸಿಎಲ್‌ನ ಡಿ ಗುಂಪಿನಲ್ಲಿರುವ ಯುವೆಂಟಸ್ ಆಡಿರುವ ಆರೂ ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ.

ಯುಸಿಎಲ್‌ನಲ್ಲಿ ಒಟ್ಟು 32 ತಂಡಗಳು ಎಂಟು ಗುಂಪುಗಳಲ್ಲಿ ಸೆಣಸುತ್ತಿವೆ. ಪ್ರತಿ ಗುಂಪಿನ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಹದಿನಾರರ ಘಟ್ಟಕ್ಕೆ ತಲುಪುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.