ADVERTISEMENT

ಫೋರ್ಬ್ಸ್‌ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡ ಕೊಹ್ಲಿ

ಏಜೆನ್ಸೀಸ್
Published 13 ಜೂನ್ 2019, 2:19 IST
Last Updated 13 ಜೂನ್ 2019, 2:19 IST
   

ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಫೋರ್ಬ್ಸ್‌–2019ರ ಪಟ್ಟಿಯಲ್ಲಿ ಏಕೈಕ ಭಾರತೀಯರಾಗಿ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅವರು ಸತತ ಎರಡನೇ ಬಾರಿಗೆ ಫೋರ್ಬ್ಸ್‌ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್‌ 11ರಂದು ಪ್ರಕಟವಾಗಿರುವ 2019ನೇ ಸಾಲಿನ ಅತಿಹೆಚ್ಚು ಸಂಭಾವನೆ ಪಡೆಯುವವರ ಫೊರ್ಬ್ಸ್‌ ಪಟ್ಟಿಯಲ್ಲಿ ಅವರು 100 ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್‌ ಪ್ರಕಾರ ವಿರಾಟ್‌ ಕೊಹ್ಲಿ ಅವರ ಈ ವರ್ಷದ ಸಂಭಾವನೆ 25 ಮಿಲಿಯನ್‌ ಡಾಲರ್‌ಗಳು (ಇಂದಿನ ಲೆಕ್ಕದಲ್ಲಿ ₹174.27 ಕೋಟಿ ). ಇದರಲ್ಲಿ 21 ಮಿಲಿಯನ್‌ ಡಾಲರ್‌ ( ₹146.39 ಕೋಟಿ) ಜಾಹೀರಾತು ಒಡಂಬಡಿಕೆಗಳ ಮೂಲಕ, 4 ಮಿಲಿಯನ್‌ ಡಾಲರ್‌ (27.88‬ ಕೋಟಿ) ಕ್ರಿಕೆಟ್‌ನ ಸಂಭಾವನೆ, ಪಂದ್ಯದ ಗೆಲುವಿನ ಪ್ರಶಸ್ತಿ ಮೊತ್ತವಾಗಿ ಸಿಕ್ಕಿದೆ.

ADVERTISEMENT

2018ರ ಸಾಲಿನಲ್ಲಿ ಪ್ರಕಟವಾಗಿದ್ದ ಫೋರ್ಬ್ಸ್‌ನ ಇದೇ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ 83ನೇ ಸ್ಥಾನ ಗಳಿಸಿದ್ದರು. ಈ ಬಾರಿ 17 ಸ್ಥಾನಗಳಷ್ಟು ಕೆಳಗಿಳಿದಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಕೊಹ್ಲಿ ಸಂಭಾವನೆ 1 ಮಿಲಿಯನ್‌ ಡಾಲರ್‌ (₹6.97 ಕೋಟಿ) ಏರಿಕೆಯಾಗಿದೆ. ಆದರೂ, ಅವರು ಈ ಬಾರಿ ಕೊನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಇನ್ನು ಅತಿಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಈ ಬಾರಿಯ ಫೋರ್ಬ್ಸ್‌ ಪಟ್ಟಿಯಲ್ಲಿ ಅರ್ಜೆಂಟೀನಾದ ಪುಟ್‌ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಎರಡನೇ ಸ್ಥಾನದಲ್ಲಿ ಪೋರ್ಚುಗಲ್‌ನ ಫುಟ್‌ಬಾಲ್‌ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರಿದ್ದಾರೆ. ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಫುಟ್‌ಬಾಲ್‌ ತಂಡದ ಆಟಗಾರ ನೈಯ್ಮರ್‌ ಇದ್ದಾರೆ.

ಫೋರ್ಬ್ಸ್‌ನ ಟಾಪ್‌ 10 ಪಟ್ಟಿ

* ಲಿಯೊನಲ್‌ ಮೆಸ್ಸಿ (ಫುಟ್‌ಬಾಲ್‌) –$127m

* ಕ್ರಿಸ್ಟಿಯಾನೋ ರೊನಾಲ್ಡೊ (ಫುಟ್ಬಾಲ್‌) –$109m

* ನೈಯ್ಮರ್‌ (ಫುಟ್ಬಾಲ್‌)– $105m

* ಕನೆಲೊ ಅಲ್ವರೆಜ್‌ ( ಬಾಕ್ಸಿಂಗ್‌)–$94m

* ರೋಜರ್‌ ಫೆಡರರ್‌ (ಟೆನ್ನಿಸ್‌) –$93.4m

* ರಸೆಲ್‌ ವಿಲ್ಸನ್‌ (ಅಮೆರಿಕನ್‌ ಫುಟ್‌ಬಾಲ್‌)- $89.5m

* ಆ್ಯರೋನ್‌ ರೋಡ್‌ಗರ್ಸ್‌ (ಅಮೇರಿನ್‌ ಫುಟ್‌ಬಾಲ್‌)- $89.3m

* ಲೀಬಾರ್ನ್‌ ಜೇಮ್ಸ್‌ (ಬಾಸ್ಕೆಟ್‌ ಬಾಲ್‌)- $89m

* ಸ್ಟೀಫನ್‌ ಕರಿ (ಬಾಸ್ಕೆಟ್‌ಬಾಲ್‌) - $79.8m

* ಕೆವಿನ್‌ ಡುರಂಟ್‌ (ಬಾಸ್ಕೆಟ್‌ಬಾಲ್‌) - $65.4m

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.