ADVERTISEMENT

ಆಸ್ಟ್ರೇಲಿಯಾದ ಕ್ರಿಕೆಟಿಗ ಬ್ಯಾರಿ ಜಾರ್ಮನ್‌ ನಿಧನ

ಏಜೆನ್ಸೀಸ್
Published 18 ಜುಲೈ 2020, 8:43 IST
Last Updated 18 ಜುಲೈ 2020, 8:43 IST
ಬ್ಯಾರಿ ಜಾರ್ಮನ್‌ –ಟ್ವಿಟರ್‌ ಚಿತ್ರ 
ಬ್ಯಾರಿ ಜಾರ್ಮನ್‌ –ಟ್ವಿಟರ್‌ ಚಿತ್ರ    

ಅಡಿಲೇಡ್‌: ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಬ್ಯಾರಿ ಜಾರ್ಮನ್‌‌‌ (84) ಅವರು ಶನಿವಾರ ನಿಧನರಾದರು.‌

ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಯು (ಎಸ್‌ಎಸಿಎ) ಈ ವಿಷಯವನ್ನು ಖಚಿತಪಡಿಸಿದೆ.

ಬ್ಯಾರಿ ಅವರಿಗೆ ಪತ್ನಿ ಹಾಗೂ ನಾಲ್ಕು ಮಂದಿ ಮಕ್ಕಳಿದ್ದಾರೆ.

ADVERTISEMENT

1959ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆಪದಾರ್ಪಣೆ ಮಾಡಿದ್ದ ಬ್ಯಾರಿ ಅವರು ಈ ಮಾದರಿಯಲ್ಲಿ ಕಾಂಗರೂ ನಾಡಿನ ಪರ ಒಟ್ಟು 19 ಪಂದ್ಯಗಳನ್ನು ಆಡಿದ್ದರು. 14.29ರ ಸರಾಸರಿಯಲ್ಲಿ 400ರನ್‌ಗಳನ್ನು ಕಲೆಹಾಕಿದ್ದರು. ಇದರಲ್ಲಿ ಎರಡು ಅರ್ಧಶತಕಗಳೂ ಸೇರಿವೆ.

ವಿಕೆಟ್‌ ಕೀಪರ್‌ ಆಗಿದ್ದ ಬ್ಯಾರಿ, 1969ರ ಜನವರಿಯಲ್ಲಿ ಆಸ್ಟ್ರೇಲಿಯಾ ಪರ ಕೊನೆಯ ಟೆಸ್ಟ್‌ ಆಡಿದ್ದರು.

1968ರಲ್ಲಿ ಆಸ್ಟ್ರೇಲಿಯಾ ತಂಡವು ಆ್ಯಷಸ್‌ ಸರಣಿಯನ್ನು ಆಡಲು ಇಂಗ್ಲೆಂಡ್‌ ಪ್ರವಾಸ ಕೈಗೊಂಡಿತ್ತು. ಆಗ ತಂಡದ ನಾಯಕರಾಗಿದ್ದ ಬಿಲ್ಲಿ ಲಾವ್ರಿ ಅವರು ಗಾಯಗೊಂಡಿದ್ದರು. ಹೀಗಾಗಿ ಒಂದು ಪಂದ್ಯದಲ್ಲಿ ಜಾರ್ಮನ್‌ ಅವರು ಕಾಂಗರೂ ನಾಡಿನ ತಂಡವನ್ನು ಮುನ್ನಡೆಸಿದ್ದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ದಕ್ಷಿಣ ಆಸ್ಟ್ರೇಲಿಯಾ ಭಾಗದ ಕ್ರಿಕೆಟಿಗರಲ್ಲಿ ಬ್ಯಾರಿ ಕೂಡ ಒಬ್ಬರು. ಅವರ ಹಾಸ್ಯ ಪ್ರವೃತ್ತಿ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣ ತುಂಬಾ ಇಷ್ಟವಾಗುತ್ತಿತ್ತು’ ಎಂದು ದಕ್ಷಿಣ ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಆ್ಯಂಡ್ರ್ಯೂ ಸಿಂಕ್ಲೇರ್‌ ತಿಳಿಸಿದ್ದಾರೆ.

1936ರ ಫೆಬ್ರುವರಿ 17ರಂದು ಅಡಿಲೇಡ್‌ನಲ್ಲಿ ಜನಿಸಿದ್ದ ಬ್ಯಾರಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಪಂದ್ಯದ ರೆಫರಿಯಾಗಿಯೂ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.