ADVERTISEMENT

ರಣಜಿ: ಹರಿಯಾಣ ವಿರುದ್ಧ ಮುಂಬೈ ನೆಚ್ಚಿನ ತಂಡ

ಕ್ವಾರ್ಟರ್‌ಫೈನಲ್‌ ಪಂದ್ಯಗಳು ಇಂದಿನಿಂದ

ಪಿಟಿಐ
Published 7 ಫೆಬ್ರುವರಿ 2025, 22:30 IST
Last Updated 7 ಫೆಬ್ರುವರಿ 2025, 22:30 IST
   

ಕೋಲ್ಕತ್ತ: ಹಾಲಿ ಚಾಂಪಿಯನ್ ಮುಂಬೈ ತಂಡ, ಶನಿವಾರ ಇಲ್ಲಿ ಆರಂಭವಾಗುವ ರಣಜಿ ಟ್ರೊಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಫೂರ್ತಿಯತ ಹರಿಯಾಣ ತಂಡವನ್ನು ಎದುರಿಸಲಿದ್ದು, ಫಾರ್ಮ್ ಮತ್ತು ಹಿನ್ನೆಲೆಯ ಸಾಧನೆಯ ಆಧಾರದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. 

ಲಾಹ್ಲಿಯ ಬನ್ಸೀಲಾಲ್‌ ಕ್ರೀಡಾಂಗಣದಲ್ಲಿ (ಹರಿಯಾಣದ ತವರು ತಾಣ) ನಡೆಯಬೇಕಾಗಿದ್ದ ಈ ಪಂದ್ಯವನ್ನು ಈಡನ್‌ ಗಾರ್ಡನ್‌ಗೆ ಸ್ಥಳಾಂತರಿಸಲಾಗಿದ್ದು, ಎರಡೂ ತಂಡಗಳ ಪ್ರಯಾಣ ಯೋಜನೆ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ಹರಿಯಾಣಕ್ಕೆ ನಿರಾಸೆಯಾಗಿದ್ದು, ಬಿಸಿಸಿಐ ಈ ಸ್ಥಳಾಂತರಕ್ಕೆ ಕಾರಣವನ್ನೂ ನೀಡಿಲ್ಲ.

ಆದರೆ ಪಕ್ಕಾ ವೃತ್ತಿಪರ ಮುಂಬೈ ತಂಡ ದೇಶಿ ಕ್ರಿಕೆಟ್‌ನ ಸರ್ವೋಚ್ಚ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ ಅಭೂತಪೂರ್ವ 42 ಬಾರಿ ಚಾಂಪಿಯನ್ ಆಗಿ ಮೆರೆದಿದೆ.

ADVERTISEMENT

ಆದರೆ ಬಲಾಢ್ಯ ಎದುರಾಳಿಯಾಗಿರುವ ಹರಿಯಾಣ ತಂಡವು ಎಂಟರ ಘಟ್ಟದ ಈ ಪಂದ್ಯ ತಟಸ್ಥ ತಾಣಕ್ಕೆ ಸ್ಥಳಾಂತರವಾಗಿರುವ ವಿಷಯಕ್ಕಿಂತ ತನ್ನ ಮುಂದಿರುವ ಸವಾಲಿನ ಬಗ್ಗೆ ಗಮನ ಕೇಂದ್ರೀಕರಿಸಿದೆ.

ಅಜಿಂಕ್ಯ ರಹಾನೆ ನೇತೃತ್ವದ ತಂಡದಲ್ಲಿ ತಾರಾ ವರ್ಚಸ್ಸಿನ ಆಟಗಾರರಿದ್ದಾರೆ. ಬೀಸಾಟವಾಡುವ ಸೂರ್ಯಕುಮಾರ್ ಯಾದವ್, ಆಲ್‌ರೌಂಡರ್ ಶಿವಂ ದುಬೆ ಅವರು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ನಂತರ ತಂಡಕ್ಕೆ ಮರಳಿದ್ದಾರೆ. ಈ ಋತುವಿನಲ್ಲಿ ಇವರು ಮುಂಬೈ ಪರ ಒಂದೊಂದು ಪಂದ್ಯ ಆಡಿದ್ದಾರೆ. ಆದರೆ ಮುಂಬೈ ತಂಡದ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟಿದ್ದೇ ಹೆಚ್ಚು.

ಅಂಕಿತ್ ಕುಮಾರ್ ನೇತೃತ್ವದ ಹರಿಯಾಣ ತಂಡವು ನಿಶಾಂತ್ ಸಿಂಧು, ಹಿಮಾಂಶು ರಾಣಾ, ಯುವರಾಜ್ ಸಿಂಗ್ ಅವರನ್ನು ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದೆ. ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್‌, ಅನುಜ್ ಟಕ್ರಾಲ್ ಮತ್ತು ಜಯಂತ್ ಯಾದವ್ ಈ ಋತುವಿನಲ್ಲಿ ಯಶಸ್ಸು ಕಂಡಿದ್ದಾರೆ.

ವಿಶ್ವಾಸದಲ್ಲಿ ವಿದರ್ಭ:

ಏಳು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಲೀಗ್‌ನಲ್ಲಿ 40 ಪಾಯಿಂಟ್ಸ್ ಗಳಿಸಿ ಎಂಟರ ಘಟ್ಟ ತಲುಪಿರುವ ವಿದರ್ಭ ಈ ಬಾರಿ ಅತಿ ಹೆಚ್ಚು ಪಾಯಿಂಟ್ಸ್ ಕಲೆಹಾಕಿದ ತಂಡವೆನಿಸಿದೆ. ಹೀಗಾಗಿ ತವರು ನಾಗ್ಪುರದಲ್ಲಿ ತಮಿಳುನಾಡು ತಂಡದ ವಿರುದ್ಧ ಶನಿವಾರ ಆರಂಭವಾಗುವ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಅದು ಗೆಲ್ಲುವ ನೆಚ್ಚಿನ ತಂಡವೆನಿಸಿದೆ.

ತಮಿಳುನಾಡು ಡಿ ಗುಂಪಿನಲ್ಲಿ ಮೂರು ಗೆಲುವು, ಮೂರು ಡ್ರಾಗಳೊಡನೆ ಅಗ್ರಸ್ಥಾನ ಪಡೆದಿತ್ತು.

ಕೇರಳಕ್ಕೆ ಸವಾಲು: ಜಮ್ಮು ಮತ್ತು ಕಾಶ್ಮೀರ ತಂಡ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿದೆ.

ಹೆಚ್ಚಿದ ಸೌರಾಷ್ಟ್ರ ಮನೋಬಲ

ಲೀಗ್‌ ಹಂತದಲ್ಲಿ ನಾಲ್ಕು ಪಂದ್ಯಗಳ ನಂತರ ಕೊನೆಯ ಸ್ಥಾನದಲ್ಲಿದ್ದ ಸೌರಾಷ್ಟ್ರ ನಂತರ ಸತತ ಮೂರು ಗೆಲುವು ಕಂಡು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿತ್ತು. ಜಯದೇವ ಉನದ್ಕತ್‌ ನೇತೃತ್ವದ ಈ ತಂಡ ತವರು ರಾಜಕೋಟ್‌ನಲ್ಲಿ ನಡೆಯುವ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ.

ಐದು ವರ್ಷಗಳಲ್ಲಿ ಮೂರನೇ ಬಾರಿ ರಣಜಿ ಟ್ರೋಫಿ ಗೆಲ್ಲಲು ಸೌರಾಷ್ಟ್ರ ಅಭಿಯಾನ ನಡೆಸಿದೆ. ಆದರೆ ಈ ತಂಡವು ಲೀಗ್‌ನಲ್ಲಿ 32 ಪಾಯಿಂಟ್ಸ್ ಕಲೆಹಾಕಿದ್ದ ಗುಜರಾತ್ ತಂಡವನ್ನು ನಿರ್ಲಕ್ಷಿಸುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.