ADVERTISEMENT

ಬ್ಯಾಟರ್‌ಗಳ ಕೌಶಲ ‍ಪ್ರಶ್ನಿಸಿದ ಗೌತಮ್ ಗಂಭೀರ್

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 22:30 IST
Last Updated 16 ನವೆಂಬರ್ 2025, 22:30 IST
ಗೌತಮ್ ಗಂಭೀರ್ 
ಗೌತಮ್ ಗಂಭೀರ್    

ಕೋಲ್ಕತ್ತ: ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ನೇಮಕವಾದ ಮೇಲೆ ಭಾರತ ತಂಡವು ವೈಟ್‌ ಬಾಲ್ ಕ್ರಿಕೆಟ್‌ನಲ್ಲಿ ಮಿಂಚುತ್ತಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಗಳಲ್ಲಿ ತಂಡವು ಜಯ ದಾಖಲಿಸಿದೆ. ಚಾಂಪಿಯನ್ಸ್ ಟ್ರೋಫಿ (ಏಕದಿನ)ಮತ್ತು ಏಷ್ಯಾ ಕಪ್ (ಟಿ20) ಕೂಡ ಜಯಿಸಿದೆ. 

ಆದರೆ ಕೆಂಪು ಚೆಂಡಿನ ಕ್ರಿಕೆಟ್ ಪಯಣ ಮಾತ್ರ ಅದೇ ರೀತಿಯಾಗಿಲ್ಲ. ಕೆಳಕ್ರಮಾಂಕದಲ್ಲಿರುವ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡಿಯಾ ತಂಡಗಳ ಎದುರು ಭಾರತ ಟೆಸ್ಟ್ ಸರಣಿಗಳಲ್ಲಿ ಗೆದ್ದಿದೆ. ಆದರೆ ನ್ಯೂಜಿಲೆಂಡ್ (3–0) ಎದುರು ತವರಿನಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ (3–1) ಭಾರತ ಸರಣಿಗಳನ್ನು ಸೋತಿತ್ತು. ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳ ಸರಣಿಯಲ್ಲಿ 2–2ರ ಡ್ರಾ ಸಾಧಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯ ಸೋತಿದೆ. 

ಗಂಭೀರ್ ನೇಮಕದ ನಂತರ ತಂಡವು ತವರಿನಲ್ಲಿ ಆಡಿದ ಆರು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಸೋತಿದೆ. ಭಾನುವಾರ ದಕ್ಷಿಣ ಆಫ್ರಿಕಾ ಎದುರು ಸೋತ ನಂತರ ಸುದ್ದಿಗೋಷ್ಠಿಯಲ್ಲಿ ಗಂಭೀರ್ ಆಡಿದ ಮಾತುಗಳು ಒಗಟಿನಂತೆ ಇದ್ದವು. ಸ್ಪಷ್ಟತೆ ಕಡಿಮೆ ಇತ್ತು. 

ADVERTISEMENT

‘ಪ್ರಸ್ತುತ ಡ್ರೆಸಿಂಗ್ ಕೋಣೆಯಲ್ಲಿರುವ ಬ್ಯಾಟರ್‌ಗಳಿಗೆ ಹೆಚ್ಚಿನ ಅನುಭವ ಇಲ್ಲ’ ಎಂದರು.  ಆದರೆ ಅವರ ಈ ಮಾತಿನ ಹಿನ್ನೆಲೆಯಲ್ಲಿ ತಂಡವನ್ನು ಒಮ್ಮೆ ಅವಲೋಕಿಸಿದರೆ; ರವೀಂದ್ರ ಜಡೇಜ (87 ಪಂದ್ಯ), ಕೆ.ಎಲ್. ರಾಹುಲ್ (65), ರಿಷಭ್ ಪಂತ್ (47), ಯಶಸ್ವಿ ಜೈಸ್ವಾಲ್ (26), ವಾಷಿಂಗ್ಟನ್ ಸುಂದರ್ (15) ಮತ್ತು ಅಕ್ಷರ್ ಪಟೇಲ್ (13) ಅವರಂತಹ ಅನುಭವಿಗಳು ಇದ್ದಾರೆ.

‘ಟೆಸ್ಟ್ ಕ್ರಿಕೆಟ್‌ನಲ್ಲಿ ಕೌಶಲಕ್ಕಿಂತ ಗಟ್ಟಿ ಮನೋಬಲ ಮುಖ್ಯವಾಗುತ್ತದೆ. ಚೆಂಡಿನ ತಿರುವು ಏನೇ ಇರಲಿ; ಇನಿಂಗ್ಸ್‌ ಆರಂಭದ 10–15 ನಿಮಿಷಗಳು ಮುಖ್ಯ. ಪರಿಸ್ಥಿತಿಗೆ ಹೊಂದಿಕೊಂಡ ಮೇಲೆ ಒತ್ತಡ ನಿರ್ವಹಿಸಲು
ಸಾಧ್ಯವಾಗುತ್ತದೆ’ ಎಂದು ಗಂಭೀರ್ ಹೇಳಿದರು. 

ಪಿಚ್‌ ತಮ್ಮ ಮನವಿಗೆ ತಕ್ಕಂತೆಯೇ ಸಿದ್ಧವಾಗಿತ್ತು ಎಂಬುದನ್ನು ಒಪ್ಪಿಕೊಂಡರು. ತಮ್ಮ ನಿರ್ಧಾರವನ್ನೂ ಸಮರ್ಥಿಸಿಕೊಂಡರು. 

‘ಇದನ್ನು ಟರ್ನಿಂಗ್ ಟ್ರ್ಯಾಕ್ (ಸ್ಪಿನ್ ಸ್ನೇಹಿ) ಎಂದು ನೀವು ಕರೆಯಬಹುದು. ಆದರೆ ವಿಕೆಟ್ ಪಡೆದವರು ಯಾರು?  ಹೆಚ್ಚು ವಿಕೆಟ್‌ಗಳು ಲಭಿಸಿದ್ದು ವೇಗಿಗಳಿಗೆ’ ಎಂದರು. ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ಒಟ್ಟು 22 ಮತ್ತು ವೇಗಿಗಳು 16 ವಿಕೆಟ್ ಗಳಿಸಿದರು. 

ಆಸ್ಪತ್ರೆಯಿಂದ ಗಿಲ್‌ ಬಿಡುಗಡೆ:

ಶನಿವಾರ ತಮ್ಮ ಕುತ್ತಿಗೆಯ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದ ಶುಭಮನ್ ಗಿಲ್ ಅವರು ತಂಡಕ್ಕೆ ಮರಳಿದ್ದಾರೆ.

ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದ ಎರಡನೇ ದಿನದಾಟದಲ್ಲಿ ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತದ ನೋವು ಅನುಭವಿಸಿದ್ದರು. ಅದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಕಲಿಸಿ ಚಿಕಿತ್ಸೆ ನೀಡಲಾಗಿತ್ತು.

ಅವರನ್ನು ದಾಖಲಿಸಿದ್ದ ವುಡ್‌ಲ್ಯಾಂಡ್ಸ್‌ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಭೇಟಿ ನೀಡಿದರು. ಗಿಲ್ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.