
ದುಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತರಬೇತಿ ವಿಧಾನಗಳ ಕುರಿತು ಭಾರತದಲ್ಲಿ ಅನೇಕ ಟೀಕೆ ಟಿಪ್ಪಣಿಗಳು ನಡೆಯುತ್ತಿವೆ. ಆದರೆ, ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ರಹಮಾನುಲ್ಲಾ ಗುರ್ಬಾಜ್ ತಮಗೆ ಮಾರ್ಗದರ್ಶನ ನೀಡಿದ ಕೋಚ್‌ಗಳಲ್ಲಿ ‘ಗಂಭೀರ್ ಅತ್ಯುತ್ತಮ’ ತರಬೇತುದಾರರು ಎಂದು ಬಣ್ಣಿಸಿದ್ದಾರೆ.
ಗಂಭೀರ್ ತರಬೇತುದರರಾದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0–3 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 0–2ರಿಂದ ಹೀನಾಯವಾಗಿ ಸೋಲುವ ಮೂಲಕ ಟೀಂ ಇಂಡಿಯಾ ಮುಖಭಂಗ ಅನುಭವಿಸಿದೆ. ಮಾತ್ರವಲ್ಲ, ಗೌತಮ್ ಗಂಭೀರ್ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ಇದೇ ಸಂದರ್ಭದಲ್ಲಿ 2024ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್ ತಂಡದ ಭಾಗವಾಗಿದ್ದ ಗುರ್ಬಾಜ್ ಅವರು ಗಂಭೀರ್ ಅವರ ತರಬೇತಿ ಕುರಿತು ಮಾತನಾಡಿದ್ದಾರೆ. ‘ಗೌತಮ್ ಸರ್ ವಿರುದ್ಧದ ಆಕ್ರೋಶ ವ್ಯಕ್ತಪಡಿಸುವುದಕ್ಕೆ ಹೆಚ್ಚಿನ ಅರ್ಥವಿಲ್ಲ’ ಎಂದು ಹೇಳಿದ್ದಾರೆ.
‘ಭಾರತದಲ್ಲಿ 140 ಕೋಟಿ ಜನರಿದ್ದರೆ, ಅದರಲ್ಲಿ 20 ರಿಂದ 30 ಲಕ್ಷ ಜನರು ಅವರ ವಿರುದ್ಧ ಮಾತನಾಡುವುದು ಸಾಮಾನ್ಯ. ಆದರೆ, ಉಳಿದ ಬಹುಸಂಖ್ಯಾತ ಭಾರತೀಯರು ಗೌತಮ್ ಸರ್ ಪರ ಇದ್ದಾರೆ. ಅವರ ಬಗ್ಗೆ ವಿನಾಃ ಕಾರಣ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘ನನ್ನ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ನಾನು ಕಂಡ ಅತ್ಯುತ್ತಮ ತರಬೇತುದಾರ ಹಾಗೂ ಮಾರ್ಗದರ್ಶಕ ಅಂದರೆ ಅದು ಗೌತಮ್ ಗಂಭೀರ್. ಅವರು ತಂಡವನ್ನು ನಿಭಾಯಿಸುವ ರೀತಿ ನನಗೆ ತುಂಬಾ ಇಷ್ಟ’ ಎಂದು ಗಂಭೀರ್ ಅವರನ್ನು ಹಾಡಿ ಹೊಗಳಿದ್ದಾರೆ.
‘ದೆಹಲಿ ನನಗೆ ತವರು ಮನೆ ಇದ್ದಂತೆ. ನಾನು ದೆಹಲಿಯಲ್ಲಿದ್ದಾಗ ಅಫ್ಗಾನಿಸ್ತಾನದಲ್ಲಿದ್ದೇನೆ ಎಂದು ಭಾಸವಾಗುತ್ತದೆ’ ಎಂದು ಗುರ್ಬಾಜ್ ಹೇಳಿದರು. ಅವರು ದೆಹಲಿಯ ಲಜಪತ್ ನಗರ, ಭೋಗಲ್, ಜಂಗ್‌ಪುರ ಪ್ರದೇಶಗಳಲ್ಲಿ ಸಿಗುವ ಅಫ್ಘಾನ್ ತಿನಿಸುಗಳನ್ನು ಸವಿಯಲು ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.