ADVERTISEMENT

ಎರಡು ಬಾರಿ ಪುಟಿದೆದ್ದ ಚೆಂಡಿಗೆ ವಾರ್ನರ್ ಸಿಕ್ಸರ್; ಕ್ರೀಡಾಸ್ಫೂರ್ತಿಗೆ ವಿರುದ್ಧ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2021, 12:25 IST
Last Updated 12 ನವೆಂಬರ್ 2021, 12:25 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಗುರುವಾರ ದುಬೈಯಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುತೂಹಲದಾಯಕ ಘಟನೆಯೊಂದು ನಡೆದಿತ್ತು.

ಪಾಕಿಸ್ತಾನ ಒಡ್ಡಿದ 177 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಐದು ವಿಕೆಟ್ ರೋಚಕ ಗೆಲುವು ದಾಖಲಿಸಿತ್ತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ 49 ರನ್‌ ಗಳಿಸಿ ಆಸೀಸ್‌ಗೆ ಉತ್ತಮ ಆರಂಭವೊದಗಿಸಲು ನೆರವಾಗಿದ್ದರು.

ಈ ನಡುವೆ ಮೊಹಮ್ಮದ್ ಹಫೀಜ್ ಎಸೆದ ಚೆಂಡು, ಪಿಚ್‌ನಲ್ಲಿ ಎರಡು ಬಾರಿ ಪುಟಿದೆದ್ದಿತ್ತು. ಇದರ ಸಂಪೂರ್ಣ ಲಾಭ ಪಡೆದ ವಾರ್ನರ್, ಚೆಂಡನ್ನು ಸಿಕ್ಸರ್‌ಗೆ ಅಟ್ಟಿದ್ದರು.

ಹಫೀಜ್ ಅವರ ಕೈಯಿಂದ ಚೆಂಡು ಜಾರಿತ್ತು ಎಂದು ಹೇಳಲಾಗುತ್ತಿದೆ. ವಾರ್ನರ್ ಕ್ರೀಡಾಸ್ಫೂರ್ತಿ ಮೆರೆದಿದ್ದರೆ 'ಡೆಡ್ ಬಾಲ್' ಎಂದು ಘೋಷಿಸಬಹುದಿತ್ತು. ಆದರೆ ಪಿಚ್‌ನಲ್ಲಿ ಚೆಂಡು ಎರಡು ಬಾರಿ ಪುಟಿದೆದ್ದ ಕಾರಣ ಅಂಪೈರ್, ಐಸಿಸಿ ನಿಮಯಗಳಿಗೆ ಅನುಸಾರವಾಗಿ 'ನೊ ಬಾಲ್' ಎಂದು ಘೋಷಿಸಿದ್ದರು.

ಪ್ರಸ್ತುತ ಘಟನೆಯು ಕ್ರೀಡಾ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿಯೂ ವಾರ್ನರ್ ಕ್ರೀಡಾಸ್ಫೂರ್ತಿ ಬಗ್ಗೆ ಪ್ರಶ್ನೆ ಎತ್ತಲಾಗುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಡೇವಿಡ್ ವಾರ್ನರ್ ಅವರ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಎಂತಹ ನಾಚಿಕೆಗೇಡಿನ ಸಂಗತಿ ಎಂದು ಟೀಕೆ ಮಾಡಿದ್ದಾರೆ.

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೂ ಗಂಭೀರ್ ಟ್ಯಾಗ್ ಮಾಡಿದ್ದಾರೆ. ಹಿಂದೆ 'ಮಂಕಡಿಂಗ್' ವಿವಾದದಲ್ಲಿ ಅಶ್ವಿನ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸಲಾಗಿತ್ತು.

ಇದಕ್ಕೆ ಉತ್ತರಿಸಿರುವ ಅಶ್ವಿನ್, 'ಅದು (ಮಂಕಡಿಂಗ್‌) ಸರಿಯಾಗಿದ್ದರೆ ಇದು ಸರಿ (ವಾರ್ನರ್ ಸಿಕ್ಸರ್) ಎಂಬುದು ಗಂಭೀರ್ ಅವರ ಅಭಿಪ್ರಾಯ. ಅದು ತಪ್ಪಾಗಿದ್ದಾರೆ ಇದು ಕೂಡ ತಪ್ಪು. ಉತ್ತಮ ಮೌಲ್ಯಮಾಪನವಲ್ಲವೇ?' ಎಂದು ಹೇಳಿದ್ದಾರೆ.

ಏತನ್ಮಧ್ಯೆ ಔಟ್ ಆಗದಿದ್ದರೂ ಡೇವಿಡ್ ವಾರ್ನರ್ ಹೊರ ನಡೆದಿದ್ದರು. ಶದಾಬ್ ಖಾನ್ ದಾಳಿಯಲ್ಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೈಗೆ ಚೆಂಡು ಭದ್ರವಾಗಿ ಸೇರಿತ್ತು. ಫೀಲ್ಡರ್ ಮನವಿಯನ್ನು ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದ್ದರು. ಈ ವೇಳೆ ಡಿಆರ್‌ಎಸ್ ಮೊರೆ ಹೋಗದ ವಾರ್ನರ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ಬ್ಯಾಟ್‌ಗೆ ತಗುಲಿರಲಿಲ್ಲ. ಇದರಿಂದಾಗಿ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.