ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ನವದೆಹಲಿ: ವೇಗದ ದಾಳಿಯ ಮುಂಚೂಣಿಯಲ್ಲಿರುವ ಮೊಹಮ್ಮದ್ ಸಿರಾಜ್ ಅವರಿಗೆ ಬೆಂಬಲವಾಗಿ ಹೆಚ್ಚಿನ ಬೌಲಿಂಗ್ ಆಯ್ಕೆ ಪಡೆಯುವುದಕ್ಕೆ ರಾಯಲ್ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡ ಮಂಗಳವಾರ ನಡೆಯುವ ಹರಾಜಿನ ವೇಳೆ ಆದ್ಯತೆ ನೀಡಲಿದೆ ಎಂದು ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸೋಮವಾರ ಇಲ್ಲಿ ತಿಳಿಸಿದರು.
ಆರ್‌ಸಿಬಿ ತಂಡವು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನಾಯಕ ಫಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸಿರಾಜ್ ಒಳಗೊಂಡಂತೆ 18 ಆಟಗಾರರನ್ನು ಉಳಿಸಿಕೊಂಡಿದೆ. 11 ಆಟಗಾರರನ್ನು ತಂಡದಿಂದ ‘ಬಿಡುಗಡೆ’ ಮಾಡಿದೆ. ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್, ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಮತ್ತು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಬಿಟ್ಟಿರುವುದರಿಂದ ಬೌಲಿಂಗ್ ವಿಭಾಗ ಬಡವಾಗಿದೆ.
‘ಸಿರಾಜ್ ನಮ್ಮ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದಾರೆ. ತಂಡದ ಮುನ್ನಡೆಗೆ ಅವರಿಗೆ ಬೆಂಬಲವಾಗಿ, ಹೊರದೇಶದ ವೇಗದ ಬೌಲರ್ ಸೇರಿದಂತೆ ಹೆಚ್ಚಿನ ಬೌಲರ್‌ಗಳ ಆಯ್ಕೆ ನಮ್ಮ ನೈಜ ಆದ್ಯತೆಯಾಗಲಿದೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಬೊಬಾಟ್ ಹೇಳಿದ್ದಾರೆ.
‘ಸ್ಥಳೀಯ ಸ್ಪಿನ್ನರ್‌ಗಳ ಆಯ್ಕೆ ಕಡೆಯೂ ಗಮನಹರಿಸಲಿದ್ದೇವೆ. ಇವರಲ್ಲಿ ಕೆಲವರು ಒಂದೆರಡು ವರ್ಷಗಳಿಂದ ಉತ್ತಮ ಅವಕಾಶ ಪಡೆದಿದ್ದಾರೆ. ಅವರು ತಂಡದ ಮುನ್ನಡೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು’ ಎಂದು ಹೇಳಿದ್ದಾರೆ.
ಮಧ್ಯಮ ಕ್ರಮಾಂಕ ಬಲಪಡಿಸಲು ಆರ್‌ಸಿಬಿಯು ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ₹17.5 ಕೋಟಿಗೆ ಮುಂಬೈ ಇಂಡಿಯನ್ಸ್ ತಂಡದಿಂದ ಪಡೆದುಕೊಂಡಿದೆ.
‘ಪ್ರಬಲ ಆಟಗಾರರು ತಂಡದಲ್ಲಿ ಉಳಿದುಕೊಂಡಿದ್ದಾರೆ. ನಮ್ಮ ಅಗ್ರ ಸರದಿ ಬಲಿಷ್ಠವಾಗಿದೆ. ಆಟಗಾರರನ್ನು ಬಿಟ್ಟುಕೊಡುವುದರ ಹಿಂದಿನ ನಿರ್ಧಾರದಲ್ಲಿ ಮಧ್ಯಮ ಕ್ರಮಾಂಕವನ್ನೂ ಬಲಪಡಿಸುವುದೂ ಸೇರಿತ್ತು. ಗ್ರೀನ್ ಸೇರಿಕೊಂಡಿರುವುದು ಒಳ್ಳೆಯ ನಡೆ’ ಎಂದಿದ್ದಾರೆ. ಏಳು ಆಟಗಾರರನ್ನು ಖರೀದಿಸಲು ಆರ್‌ಸಿಬಿ ಬಳಿ ₹40.75 ಕೋಟಿ ಮೊತ್ತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.