ADVERTISEMENT

ಭಾರತೀಯ ಸಂಪ್ರಾದಾಯದಂತೆ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 15:06 IST
Last Updated 16 ಮಾರ್ಚ್ 2020, 15:06 IST
   

ಮೆಲ್ಬೋರ್ನ್‌:ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರು ಭಾರತ ಮೂಲದ ಚೆಲುವೆ ವಿನಿ ರಾಮನ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಚಿತ್ರಗಳನ್ನು ವಿನಿ ರಾಮನ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಿಶ್ಚಿತಾರ್ಥ ಫೋಟೊವನ್ನು ಹಂಚಿಕೊಂಡಿರುವ ಅವರು, ‘ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ನಡೆದಿದೆ. ಮದುವೆ ಎಂದರೆ ಹೇಗಿರಬೇಕು ಎಂಬುದರ ಸಣ್ಣ ಪರಿಚಯವನ್ನು ಮ್ಯಾಕ್ಸ್‌ವೆಲ್‌ಗೆ ಮಾಡಿಕೊಟ್ಟಿದ್ದೇನೆ. ಸಂಭ್ರಮವನ್ನು ಆಚರಿಸಲು ನಮ್ಮಿಬ್ಬರ ಕುಟುಂಬಗಳ ಸ್ನೇಹಿತರು ಆಗಮಿಸಿದ್ದರು. ಈ ವೇಳೆ ಹಾಜರಿದ್ದ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಮದುವೆಯೂ ಭಾರತ ಸಂಪ್ರದಾಯದಂತೆಯೇ ನೆರವೇರಲಿದೆ.ಭಾರತ ಮೂಲದವರಾದ ವಿನಿ ರಾಮನ್‌, ಮೆಲ್ಬೋರ್ನ್‌ನಲ್ಲಿ ಜನಿಸಿದವರು. ಫಾರ್ಮಾಸಿಸ್ಟ್‌ ಆಗಿರುವ ಮೆಲ್ಬೋರ್ನ್‌ನಲ್ಲಿ ನೆಲೆಸಿದ್ದಾರೆ.

ADVERTISEMENT

ಟಿ20 ಕ್ರಿಕೆಟ್‌ಗೆ ಹೇಳಿಮಾಡಿಸಿದ ಆಟಗಾರ ಎನಿಸಿರುವ ಮ್ಯಾಕ್ಸ್‌ವೆಲ್‌ ಹಾಗೂ ವಿನಿ ರಾಮನ್‌ 2017ರಲ್ಲಿ ಮೊದಲ ಸಲ ಭೇಟಿಯಾಗಿದ್ದರು. ಅದಾದ ಬಳಿಕ ಸಾಕಷ್ಟು ಸಲ ಜೊತೆಯಾಗಿ ಕಾಣಿಸಿಕೊಂಡಿದ್ದರು. ಜೊತೆಗಿರುವ ಚಿತ್ರಗಳನ್ನು ಈ ಜೋಡಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಲ ಹಂಚಿಕೊಂಡಿತ್ತಾದರೂ, ಮದುವೆಯಾಗುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ.

ಆಸ್ಟ್ರೇಲಿಯಾದ ಪ್ರಮುಖ ಆಲ್ರೌಂಡರ್ ಎನಿಸಿರುವ ಮ್ಯಾಕ್ಸ್‌ವೆಲ್‌ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ಪರ ಆಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.