ADVERTISEMENT

IPL–2023 | ಋತುರಾಜ್ ಅಮೋಘ ಬ್ಯಾಟಿಂಗ್; ಚಾಂಪಿಯನ್ ಗುಜರಾತ್‌ಗೆ ಸವಾಲಿನ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2023, 16:13 IST
Last Updated 31 ಮಾರ್ಚ್ 2023, 16:13 IST
ಋತುರಾಜ್‌ ಗಾಯಕವಾಡ್‌ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: @ChennaiIPL)
ಋತುರಾಜ್‌ ಗಾಯಕವಾಡ್‌ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: @ChennaiIPL)   

ಅಹಮದಾಬಾದ್: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟಿ20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್ ಟೈಟನ್ಸ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸವಾಲಿನ ಗುರಿ ನೀಡಿದೆ. ಅಮೋಘ ಆಟವಾಡಿದ ಕಿಂಗ್ಸ್ ಪಡೆಯ ಆರಂಭಿಕ ಬ್ಯಾಟರ್‌ ಋತುರಾಜ್‌ ಗಾಯಕವಾಡ್‌, ಶತಕದ ಹೊಸ್ತಿಲಲ್ಲಿ ಎಡವಿದರು.

ಇಲ್ಲಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿರುವ ಈ ಪಂದ್ಯದಲ್ಲಿ, ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 178 ರನ್ ಕಲೆಹಾಕಿದೆ.

ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಗಾಯಕವಾಡ್‌ ಜೊತೆ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ನ ಡೆವೋನ್ ಕಾನ್ವೆ ಕೇವಲ 1 ರನ್‌ ಗಳಿಸಿ ಔಟಾದರು. ಬಳಿಕ ಬಂದ ಮೋಯಿನ್‌ ಅಲಿ 24 ರನ್‌ ಗಳಿಸಿದರೆ, ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಆಟ 7 ರನ್‌ಗೆ ಸೀಮಿತವಾಯಿತು. ಅನುಭವಿ ಅಂಬಟಿ ರಾಯುಡು 12 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ರವೀಂದ್ರ ಜಡೇಜಾ 1 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು, ಚೆನ್ನೈ ತಂಡಕ್ಕೆ ಅಲ್ಪ ಹಿನ್ನಡೆಯಾಯಿತು.

ADVERTISEMENT

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕ್ರೀಸ್‌ಗೆ ಅಂಟಿಕೊಂಡು ಆಡಿದ ಗಾಯಕವಾಡ್‌, ಚೆನ್ನೈ ಇನಿಂಗ್ಸ್‌ಗೆ ಬಲ ತುಂಬಿದರು. ಟೈಟನ್ಸ್‌ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಅವರು ಕೇವಲ 50 ಎಸೆತಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್‌ ಸಹಿತ 92 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಕೊನೇ ಓವರ್‌ನಲ್ಲಿ ಗುಡುಗಿದ ನಾಯಕ ಎಂ.ಎಸ್‌.ಧೋನಿ (7 ಎಸೆತಗಳಲ್ಲಿ 14 ರನ್‌), ತಂಡದ ಮೊತ್ತವನ್ನು 180ರ ಸನಿಹಕ್ಕೆ ಕೊಂಡೊಯ್ದರು.

ಗಾಯಕವಾಡ್‌ ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್‌ಗಳು 71 ಎಸೆತಗಳನ್ನು ಎದುರಿಸಿ 78 ರನ್‌ ಗಳಿಸಲಷ್ಟೇ ಶಕ್ತರಾದರು.

ಟೈಟನ್ಸ್‌ ಪರ ಮೊಹಮ್ಮದ್‌ ಶಮಿ, ರಶೀದ್ ಖಾನ್ ಮತ್ತು ಅಲ್ಜಾರಿ ಜೋಸೆಫ್‌ ತಲಾ 2 ವಿಕೆಟ್ ಪಡೆದರೆ, ಇನ್ನೊಂದು ವಿಕೆಟ್‌ ಜೋಶುವಾ ಲಿಟ್ಟೆ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.