ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್
–ಪಿಟಿಐ ಚಿತ್ರ
ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡವು, ಐಪಿಎಲ್ ಪಾಯಿಂಟ್ ಪಟ್ಟಿಯ ತಳದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಭಾನುವಾರ ನಡೆಯುವ ಪಂದ್ಯದಲ್ಲಿ ಎದುರಿಸಲಿದ್ದು, ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಗುರಿಯಲ್ಲಿದೆ. ಇತ್ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯ.
ಶುಕ್ರವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸನ್‌ರೈಸರ್ಸ್ ಹೈದರಾಬಾದಿಗೆ ಸೋತ ಕಾರಣ ಟೈಟನ್ಸ್ ತಂಡಕ್ಕೆ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಅವಕಾಶ ಜೀವಂತವಾಗಿ ಉಳಿದಿದೆ. ಚೆನ್ನೈ ಮೇಲೆ ಗೆದ್ದರೆ ಟೈಟನ್ಸ್ ತಂಡ 20 ಪಾಯಿಂಟ್ಸ್ ಗಳಿಸಿದಂತೆ ಆಗಲಿದ್ದು ಮೊದಲ ಎರಡು ಸ್ಥಾನಗಳಲ್ಲಿ ಒಂದು ಖಚಿತವಾಗಲಿದೆ. ಇದರಿಂದ ಫೈನಲ್ ಅವಕಾಶಕ್ಕೆ ಹತ್ತಿರವಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಈ ಪಂದ್ಯವು ಯುವ ಪಡೆಯನ್ನು ಕಟ್ಟುವ ಪ್ರಕ್ರಿಯೆಯಾಗಿ ಅಷ್ಟೇ ಉಳಿದಿದೆ. ಯುವ ಆಟಗಾರರಿಗೆ ಅವಕಾಶ, ಸಂಯೋಜನೆ ಪರೀಕ್ಷಿಸಲು ಈ ಪಂದ್ಯ ಬಳಸಬಹುದು.
ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿರುವ ಶುಭಮನ್ ಗಿಲ್, ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರು ಟೈಟನ್ಸ್ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದಾರೆ. ಆಕರ್ಷಕ ಆಟಗಾರ ಬಟ್ಲರ್ ಈ ಪಂದ್ಯದ ನಂತರ ತವರಿಗೆ ಮರಳಲಿದ್ದಾರೆ. ಹೀಗಾಗಿ ಶಾರೂಖ್ ಖಾನ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರ ಮೇಲೆ ಹೊಣೆ ಹೆಚ್ಚಲಿದೆ. ಇವರಿಬ್ಬರೂ ಲಖನೌ ವಿರುದ್ಧ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ತಂಡದ ವೇಗದ ಬೌಲಿಂಗ್‌ನಲ್ಲಿ ಶಿಸ್ತು ಮೂಡಬೇಕಾಗಿದೆ. ಸ್ಪಿನ್ನರ್ ರಶೀದ್ ಖಾನ್ ಧಾರಾಳಿಯಾಗಿದ್ದಾರೆ.
ಸಿಎಸ್‌ಕೆ ಬ್ಯಾಟಿಂಗ್, ಯುವ ಉತ್ಸಾಹಿಗಳಾದ ಆಯುಷ್ ಮ್ಹಾತ್ರೆ, ಉರ್ವಿಲ್ ಪಟೇಲ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ಅವಲಂಬಿಸಿದೆ.
ರಾಜಸ್ಥಾನ ರಾಯಲ್ಸ್‌ಗೆ ಈ ಹಿಂದಿನ ಪಂದ್ಯ ಸೋತ ನಂತರ ತಮ್ಮ ತಂಡ ತಳದಲ್ಲಿರಲು ಯೋಗ್ಯ ಎಂದು ಚೆನ್ನೈ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.
ನಾಯಕ, 43 ವರ್ಷ ವಯಸ್ಸಿನ ಧೋನಿ ಅವರ ಐಪಿಎಲ್ ಭವಿಷ್ಯ ಇನ್ನೂ ನಿಗೂಢವಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.