ADVERTISEMENT

ವಿಶ್ವಕಪ್ ಕ್ರಿಕೆಟ್‌: ಪಾಕ್‌ ಸೆಮಿಫೈನಲ್‌ ಹಾದಿ ಕಠಿಣ

ಅಫ್ಗಾನಿಸ್ತಾನಕ್ಕೆ ಶರಣಾದ ಬಾಬರ್‌ ಅಜಂ ಬಳಗ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 12:58 IST
Last Updated 24 ಅಕ್ಟೋಬರ್ 2023, 12:58 IST
ಅಫ್ಗಾನಿಸ್ತಾನ ತಂಡದ ನಾಯಕ ಹಷ್ಮತ್‌ಉಲ್ಲಾ ಶಾಹಿದಿ ಅವರ ಸಂಭ್ರಮ –ಪಿಟಿಐ ಚಿತ್ರ
ಅಫ್ಗಾನಿಸ್ತಾನ ತಂಡದ ನಾಯಕ ಹಷ್ಮತ್‌ಉಲ್ಲಾ ಶಾಹಿದಿ ಅವರ ಸಂಭ್ರಮ –ಪಿಟಿಐ ಚಿತ್ರ   

ಚೆನ್ನೈ (ಪಿಟಿಐ/ ಎಎಫ್‌ಪಿ): ಅಫ್ಗಾನಿಸ್ತಾನದ ಕೈಯಲ್ಲಿ ಎದುರಾದ ಅನಿರೀಕ್ಷಿತ ಸೋಲು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಸೆಮಿಫೈನಲ್‌ ಪ್ರವೇಶದ ಸಾಧ್ಯತೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಮೊದಲ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಆರಂಭ ಪಡೆದಿದ್ದ ಬಾಬರ್‌  ಅಜಂ ಬಳಗ, ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದೆ. ಚೆನ್ನೈನಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಹಷ್ಮತ್‌ಉಲ್ಲಾ ಶಾಹಿದಿ ಬಳಗವು ಪಾಕ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಅಫ್ಗನ್‌ ತಂಡಕ್ಕೆ ಪಾಕ್‌ ಎದುರು ದೊರೆತ ಮೊದಲ ಜಯ ಇದು. ಈ ಹಿಂದೆ ಏಳು ಸಲ ಪೈಪೋಟಿ ನಡೆಸಿದ್ದರೂ ಗೆಲುವು ದಕ್ಕಿರಲಿಲ್ಲ.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಪಾಕ್‌ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 ರನ್‌ ಪೇರಿಸಿತು. 92 ಎಸೆತಗಳಲ್ಲಿ 74 ರನ್‌ ಗಳಿಸಿದ ಬಾಬರ್‌ ಅಜಂ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಶಾದಾಬ್‌ ಖಾನ್‌ (40; 38 ಎ.) ಮತ್ತು ಇಫ್ತಿಕಾರ್‌ ಅಹಮದ್‌ (40; 27 ಎ., 4X2, 6X4) ಅವರು ಗಮನ ಸೆಳೆದರು. 49 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ಯುವ ಸ್ಪಿನ್ನರ್‌ ನೂರ್‌ ಅಹ್ಮದ್‌ ಪಾಕ್‌ ಬ್ಯಾಟರ್‌ಗಳನ್ನು ನಿಯಂತ್ರಿಸಿದರು.

ಅಫ್ಗನ್‌ ತಂಡಕ್ಕೆ ಈ ಗುರಿ ಸವಾಲಾಗಿ ಪರಿಣಮಿಸಲೇ ಇಲ್ಲ. 49 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಐತಿಹಾಸಿಕ ಗೆಲುವು ದಾಖಲಿಸಿತು. ರಹಮಾನುಲ್ಲಾ ಗುರ್ಬಾಜ್‌ (65; 53 ಎ., 4X9, 6X1) ಮತ್ತು ಇಬ್ರಾಹಿಂ ಜದ್ರಾನ್ (87; 113 ಎ., 4X10) ಮೊದಲ ವಿಕೆಟ್‌ಗೆ 130 ರನ್‌ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಜದ್ರಾನ್‌, ಔಟಾಗುವ ಮುನ್ನ ಎರಡನೇ ವಿಕೆಟ್‌ಗೆ ರಹಮತ್‌ ಶಾ (ಔಟಾಗದೆ 77; 84 ಎ., 4X5, 6X2) ಜತೆ 60 ರನ್‌ ಸೇರಿಸಿದರು. ರಹಮತ್‌ ಮತ್ತು ನಾಯಕ ಹಷ್ಮತ್‌ಉಲ್ಲಾ (ಔಟಾಗದೆ 48; 45 ಎ., 4X4) ಅವರು ಮುರಿಯದ ಮೂರನೇ ವಿಕೆಟ್‌ಗೆ 96 ರನ್‌ ಕಲೆಹಾಕಿ ತಂಡವನ್ನು ಸ್ಮರಣೀಯ ಜಯದತ್ತ ಕೊಂಡೊಯ್ದರು.

ಮೊನಚು ಕಳೆದುಕೊಂಡ ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಮಾಡಿದ ಲೋಪಗಳು ಪಾಕ್‌ ತಂಡಕ್ಕೆ ಮುಳುವಾಗಿ ಪರಿಣಮಿಸಿದವು. ಅಫ್ಗನ್‌ ತಂಡ ಇದಕ್ಕೂ ಮುನ್ನ ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಅಚ್ಚರಿ ಉಂಟುಮಾಡಿತ್ತು.

ಐದು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್‌ ಕಲೆಹಾಕಿರುವ ಪಾಕ್‌ ತಂಡ ಸೆಮಿ ಪ್ರವೇಶದ ಸಾಧ್ಯತೆ ಜೀವಂತವಾಗಿರಬೇಕಾದರೆ ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ.

‘ಫೀಲ್ಡಿಂಗ್‌ ವೇಳೆ ಆಟಗಾರರಿಂದ ಚುರುಕುತನ ಕಾಣಲಿಲ್ಲ. ಇಂತಹ ಪಂದ್ಯಗಳನ್ನು ಗೆಲ್ಲಬೇಕಾದರೆ ಫೀಲ್ಡರ್‌ಗಳು ಹೆಚ್ಚುವರಿ ಪ್ರಯತ್ನ ಮಾಡಬೇಕು ಮತ್ತು ಫಿಟ್ ಆಗಿರಬೇಕು. ಆದರೆ ಒಂದು ತಂಡವಾಗಿ ಹೋರಾಡುವಲ್ಲಿ ಎಡವಿದೆವು’ ಎಂದು ಬಾಬರ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

‘ನಾವು ವಿಭಿನ್ನ ಯೋಜನೆ, ವಿಭಿನ್ನ ಮನಸ್ಥಿತಿಯೊಂದಿಗೆ ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯಬೇಕಾಗುತ್ತದೆ. ತಂಡದಲ್ಲಿ ಸಕಾರಾತ್ಮಕ ಮನೋಭಾವ ತರಲು ಪ್ರಯತ್ನಿಸುತ್ತೇನೆ’ ಎಂದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 282 (ಅಬ್ದುಲ್ಲಾ ಶಫೀಕ್‌ 58, ಬಾಬರ್‌ ಅಜಂ 74, ಸೌದ್‌ ಶಕೀಲ್‌ 25, ಶಾದಾಬ್‌ ಖಾನ್‌ 40, ಇಫ್ತಿಕಾರ್‌ ಅಹ್ಮದ್‌ 40, ನೂರ್‌ ಅಹ್ಮದ್‌ 49ಕ್ಕೆ 3, ನವೀನ್‌ ಉಲ್‌ ಹಕ್ 52ಕ್ಕೆ 2, ಮೊಹಮ್ಮದ್‌ ನಬಿ 31ಕ್ಕೆ 1)

ಅಫ್ಗಾನಿಸ್ತಾನ 49 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 286 (ರಹಮಾನುಲ್ಲಾ ಗುರ್ಬಾಜ್‌ 65, ಇಬ್ರಾಹಿಂ ಜದ್ರಾನ್ 87, ರಹಮತ್‌ ಶಾ ಔಟಾಗದೆ 77, ಹಷ್ಮತ್‌ಉಲ್ಲಾ ಶಾಹಿದಿ ಔಟಾಗದೆ 48, ಹಸನ್‌ ಅಲಿ 44ಕ್ಕೆ 1) ಫಲಿತಾಂಶ: ಅಫ್ಗಾನಿಸ್ತಾನಕ್ಕೆ 8 ವಿಕೆಟ್‌ ಗೆಲುವು

ಪಾಕಿಸ್ತಾನ ವಿರುದ್ಧ ಗೆದ್ದ ಅಫ್ಗಾನಿಸ್ತಾನ ತಂಡದ ಆಟಗಾರರು ಪ್ರೇಕ್ಷಕರತ್ತ ಕೈಬೀಸಿ ಸಂಭ್ರಮಿಸಿದರು –ಪಿಟಿಐ ಚಿತ್ರ

ಕಾಬೂಲ್‌ನಲ್ಲಿ ಸಂಭ್ರಮಾಚರಣೆ ಕಾಬೂಲ್

ಪಾಕ್‌ ವಿರುದ್ಧ ಗೆಲುವು ಪಡೆಯುತ್ತಿದ್ದಂತೆಯೇ ಅಫ್ಗನ್‌ ತಂಡದ ಅಭಿಮಾನಿಗಳು ಕಾಬೂಲ್‌ನಲ್ಲಿ ಸಂಭ್ರಮಚಾರಣೆ ಮಾಡಿದ್ದಾರೆ. ಸೋಮವಾರ ರಾತ್ರಿ ಬೀದಿಗಿಳಿದ ನೂರಾರು ಮಂದಿ ಪಟಾಕಿ ಸಿಡಿಸಿದರಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಸಂತಸಪಟ್ಟರು. ತಾಲಿಬಾನ್‌ ಆಡಳಿತವು ಸಂಗೀತಕ್ಕೆ ನಿಷೇಧ ಹೇರಿದ್ದರೂ ಕ್ರಿಕೆಟ್‌ ಪ್ರೇಮಿಗಳು ಅದನ್ನು ಲೆಕ್ಕಿಸದೆ ಹಾಡು ನೃತ್ಯದ ಮೂಲಕ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.