
ಹೈದರಾಬಾದ್ : ಭಾರತ ಕ್ರಿಕೆಟ್ ತಂಡದ ತಾರೆ ಹಾರ್ದಿಕ್ ಪಾಂಡ್ಯ ಅವರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ, ಇಲ್ಲಿನ ಜಿಮ್ಖಾನ ಮೈದಾನದಲ್ಲಿ ನಡೆಯಬೇಕಿದ್ದ ಬರೋಡಾ ಮತ್ತು ಗುಜರಾತ್ ನಡುವಣ ಪಂದ್ಯವನ್ನು ಉಪ್ಪಳದ ರಾಜೀವ್‌ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು.
ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ಹಾಗೂ ಮೈದಾನದ ಟಿಕೆಟ್ ಕೌಂಟರ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಭಿಮಾನಿಗಳು, ಆಟಗಾರರ ನೆಟ್ ಪ್ರಾಕ್ಟೀಸ್ ವೇಳೆಯೂ ಸುತ್ತುವರಿದಿದ್ದರು. ಹೀಗಾಗಿ, ಹೆಚ್ಚು ಸುರಕ್ಷಿತವಲ್ಲದ ಜಿಮ್ಖಾನಾ ಮೈದಾನದಿಂದ ಪಂದ್ಯ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹಾರ್ದಿಕ್ ಅವರ ಸಹೋದರ ಕೃನಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡವು ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡವು ರಾಜ್ ಲಿಂಬನಿ (5ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು 14.1 ಓವರ್‌ಗಳಲ್ಲಿ 73 ರನ್‌ಗಳಿಗೆ ಕುಸಿಯಿತು. ಹಾರ್ದಿಕ್ 4 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಬರೋಡಾ, 6.4 ಓವರ್‌ಗಳಲ್ಲಿ 2 ವಿಕೆಟ್‌ಗೆ 74 ರನ್ ಗಳಿಸಿ ಬೇಗನೇ ಗೆಲುವು ಸಾಧಿಸಿತು. ಹಾರ್ದಿಕ್ ಅವರು 10 ರನ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.