
ಪಲ್ಲೆಕೆಲೆ: ನಾಯಕ ಹ್ಯಾರಿ ಬ್ರೂಕ್ (100, 51 ಎಸೆತ) ಅವರು ಆಕರ್ಷಕ ಶತಕ ಬಾರಿಸಿ ಇಂಗ್ಲೆಂಡ್ ತಂಡವನ್ನು ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಮುನ್ನಡೆಸಿದರು. ಇಂಗ್ಲೆಂಡ್ ಮಂಗಳವಾರ ನಡೆದ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು (2016ರಿಂದ) ಟಿ20 ವಿಶ್ವಕಪ್‌ನಲ್ಲಿ ಸತತ ಐದನೇ ಬಾರಿ ನಾಲ್ಕರ ಘಟ್ಟ ಪ್ರವೇಶಿಸಿದ ದಾಖಲೆಯನ್ನೂ ಬರೆಯಿತು. ಇನ್ನೊಂದೆಡೆ ಪಾಕಿಸ್ತಾನದ ಸೆಮಿಫೈನಲ್ ಕನಸು ಬಹುತೇಕ ಕಮರಿತು. ನ್ಯೂಜಿಲೆಂಡ್ ವಿರುದ್ಧ ಈ ತಂಡದ ಮೊದಲ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಜಂಟಿ ಆತಿಥೇಯ ಶ್ರೀಲಂಕಾ ವಿರುದ್ಧ ಸುಲಭ ಜಯಗಳಿಸಿದ್ದು, ಒಟ್ಟು 4 ಪಾಯಿಂಟ್ಸ್ ಗಳಿಸಿದೆ.
165 ರನ್‌ಗಳ ಗುರಿ ಎದುರಿಸಿದ ಇಂಗ್ಲೆಂಡ್ ಒಂದು ಹಂತದಲ್ಲಿ 58 ರನ್‌ಗಳಾಗುಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಬ್ರೂಕ್, ಸ್ಯಾಮ್ ಕರನ್ (16) ಜೊತೆಗೂಡಿ ಐದನೇ ವಿಕೆಟ್‌ಗೆ ಕ್ಷಿಪ್ರಗತಿಯಲ್ಲಿ 45 ರನ್ ಸೇರಿಸಿದ್ದರಿಂದ ತಂಡ ಗಮನಾರ್ಹವಾಗಿ ಚೇತರಿಸಿತು. ನಂತರ ಇನ್ನೊಬ್ಬ ಆಲ್‌ರೌಂಡರ್ ವಿಲ್ ಜಾಕ್ಸ್ (28, 23 ಎಸೆತ) ಜೊತೆ 52 ರನ್‌ಗಳ ನಿರ್ಣಾಯಕ ಜೊತೆಯಾಟದಲ್ಲಿ ಪಾಲ್ಗೊಂಡಿದ್ದು ಪಂದ್ಯವನ್ನು ಇಂಗ್ಲೆಂಡ್ ಕಡೆ ವಾಲಿಸಿತು. ಬ್ರೂಕ್ ಆಟದಲ್ಲಿ 10 ಬೌಂಡರಿ, 4 ಸಿಕ್ಸರ್‌ಗಳಿದ್ದವು. ಟಿ20 ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ ಯಾವುದೇ ತಂಡದ ಮೊದಲ ನಾಯಕ ಎಂಬ ಹಿರಿಮೆಗೂ ಅವರು ಪಾತ್ರವಾದರು.
ಬ್ರೂಕ್ ನಿರ್ಗಮನದ ನಂತರ ಇಂಗ್ಲೆಂಡ್ ಎರಡು ವಿಕೆಟ್ ಬೇಗ ಕಳೆದುಕೊಂಡಿತು. ಕೊನೆಯಲ್ಲಿ ಜೋಫ್ರಾ ಆರ್ಚರ್ ಗೆಲುವಿನ ಬೌಂಡರಿ ಬಾರಿಸಿದರು. ಇಂಗ್ಲೆಂಡ್ ಐದು ಎಸೆತಗಳಿರುವಂತೆ 8 ವಿಕೆಟ್‌ಗೆ 166 ರನ್ ಗಳಿಸಿತು.
ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಅತ್ಯುತ್ತಮ ಲಯದಲ್ಲಿರುವ ಸಾಹಿಬ್‌ಝಾದ ಫರ್ಹಾನ್ ಅವರ 63 ರನ್‌ಗಳ (45 ಎಸೆತ) ನೆರವಿನಿಂದ 9 ವಿಕೆಟ್‌ಗೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು.
ಇಂಗ್ಲೆಂಡ್‌ನ ಸ್ಪಿನ್ನರ್‌ಗಳು ಪಾಕ್ ಇನಿಂಗ್ಸ್‌ನ ಬಹುಪಾಲು ಪರಿಣಾಮಕಾರಿಯಾಗಿದ್ದರು. ಇದರ ನಡುವೆ ಮಿಂಚಿದ ಫರ್ಹಾನ್ ಅವರ ಇನಿಂಗ್ಸ್‌ನಲ್ಲಿ ಏಳು ಬೌಂಡರಿಗಳ ಜೊತೆ ಎರಡು ಸಿಕ್ಸರ್‌ಗಳಿದ್ದವು. ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್, ಇಂಗ್ಲೆಂಡ್ ಬೌಲರ್‌ಗಳ ಪೈಕಿ ಪ್ರಭಾವಿಯೆನಿಸಿ 24 ರನ್ನಿಗೆ 3 ವಿಕೆಟ್ ಪಡೆದರು. 18ನೇ ಓವರಿನಲ್ಲಿ ಅವರು ಸತತವಾಗಿ 2 ವಿಕೆಟ್‌ಗಳನ್ನು ಪಡೆದಿದ್ದ ರಿಂದ ಸಲ್ಮಾನ್ ಅಲಿ ಆಘಾ ಪಡೆಗೆ 175ರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಜೋಫ್ರಾ ಆರ್ಚರ್ ಅವರು ಆರಂಭ ಆಟಗಾರ ಸೈಮ್ ಅಯೂಬ್ (7) ಅವರ ವಿಕೆಟ್ ಪಡೆದರೆ, ನಾಯಕ ಸಲ್ಮಾನ್ ಆಘಾ ಅವರು ಡಾಸನ್ ಬೌಲಿಂಗ್‌ನಲ್ಲಿ ಜೇಮಿ ಓವರ್ಟನ್ (5) ಡೈವ್ ಮಾಡಿ ಹಿಡಿದ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಆಗ ಮೊತ್ತ 2 ವಿಕೆಟ್‌ಗೆ 27. ನಂತರ ಫರ್ಹಾನ್ ಎರಡು ಜೊತೆಯಾಟಗಳ ಮೂಲಕ ಚೇತರಿಕೆ ನೀಡಿದರು.
ಪಾಕಿಸ್ತಾನ: 20 ಓವರುಗಳಲ್ಲಿ 9 ವಿಕೆಟ್‌ಗೆ 164 (ಸಾಹಿಬ್‌ಝಾದ ಫರ್ಹಾನ್ 63, ಬಾಬರ್ ಆಜಂ 25, ಫಖರ್ ಜಮಾನ್ 25, ಶದಾಬ್ ಖಾನ್ 23; ಜೋಫ್ರಾ ಆರ್ಚರ್ 32ಕ್ಕೆ2, ಜೇಮಿ ಓವರ್ಟನ್ 26ಕ್ಕೆ2, ಲಿಯಾಮ್ ಡಾಸನ್ 24ಕ್ಕೆ3); ಇಂಗ್ಲೆಂಡ್: 19.1 ಓವರುಗಳಲ್ಲಿ 8 ವಿಕೆಟ್‌ಗೆ 166 (ಹ್ಯಾರಿ ಬ್ರೂಕ್ 100, ವಿಲ್ ಜಾಕ್ಸ್ 28; ಶಾಹೀನ್ ಶಾ ಅಫ್ರೀದಿ 30ಕ್ಕೆ4, ಉಸ್ಮಾನ್ ತಾರಿಖ್ 31ಕ್ಕೆ2, ಮೊಹ್ಮದ್ ನವಾಜ್ 26ಕ್ಕೆ2)
ಪಂದ್ಯದ ಆಟಗಾರ: ಹ್ಯಾರಿ ಬ್ರೂಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.