ADVERTISEMENT

ಧೋನಿ ತಲೆಯಲ್ಲೇನಿದೆ ಎಂಬುದು ಆತನ ನೆರಳಿಗೂ ತಿಳಿಯದು: ಹರ್ಷ ಬೋಗ್ಲೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 10:22 IST
Last Updated 28 ಮಾರ್ಚ್ 2020, 10:22 IST
   

ಭಾರತ ಕ್ರಿಕೆಟ್‌ನ ಯಶಸ್ವಿ ನಾಯಕರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುವ ಎಂಎಸ್‌ ಧೋನಿ 2019ರ ವಿಶ್ವಕಪ್‌ ಟೂರ್ನಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಒಂದೊಮ್ಮೆ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಮಿಂಚಿದರೆ ತಂಡಕ್ಕೆ ಮರಳುವ ಅವಕಾಶ ಸಿಗಬಹುದು ಎಂಬುದು ಅವರ ಅಭಿಮಾನಿಗಳ ನಂಬಿಕೆಯಾಗಿತ್ತು. ಆದರೆ, ಕೊರೊನಾವೈರಸ್‌ ಸೋಂಕು ಭೀತಿಯಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ. ಸೋಂಕು ಸೃಷ್ಟಿಸಿರುವ ಭೀತಿ ಇನ್ನೂ ತಿಳಿಗೊಂಡಿಲ್ಲ. ಹಾಗಾಗಿ ಟೂರ್ನಿ ರದ್ದಾದರೂ ಅಚ್ಚರಿಪಡಬೇಕಾಗಿಲ್ಲ. ಹೀಗಿರುವಾಗ ಧೋನಿ ಕ್ರಿಕೆಟ್‌ ಭವಿಷ್ಯದ ಬಗ್ಗೆ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ಮಾತನಾಡಿದ್ದಾರೆ.

ಕ್ರಿಕ್‌ಬಜ್‌ ಕ್ರೀಡಾ ವೆಬ್‌ಸೈಟ್‌ ಜೊತೆಗೆ ಮಾತನಾಡಿರುವ ಅವರು, ‘ಖಂಡಿತವಾಗಿ ಧೋನಿ ಏನನ್ನು ಚಿಂತಿಸುತ್ತಿದ್ದಾರೆ ಎಂಬುದನ್ನು ತಿಳಿಯುವುದು ಸಾಧ್ಯವೇ ಇಲ್ಲ. ಆತನ ನೆರಳಿಗೂ ಅದು ಗೊತ್ತಾಗಲು ಸಾಧ್ಯವಿಲ್ಲ ಎನಿಸುತ್ತದೆ. ಆತ ತನ್ನ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಎದೆಯಲ್ಲಿ ರಕ್ಷಿಸಿಕೊಂಡಿರುತ್ತಾನೆ’ ಎಂದಿದ್ದಾರೆ.

‘ನಾಯಕತ್ವ ತ್ಯಜಿಸಿದಂತೆ ಮತ್ತು ಟೆಸ್ಟ್‌ ಕ್ರಿಕೆಟ್‌ನಿಂದ ನಿರ್ಗಮಿಸಿದರೀತಿಯೇ ವಿದಾಯದ ವಿಚಾರವನ್ನೂ ಧೋನಿ ಬಿಟ್ಟುಕೊಡುವುದಿಲ್ಲ. ಆದರೆ, ಆತ ಇಲ್ಲ ಎಂಬುದು ಎಲ್ಲರಿಗೂ ಮುಂದೊಂದು ದಿನ ಅರಿವಿಗೆ ಬರುತ್ತದೆ ಅಷ್ಟೇ‌’

ADVERTISEMENT

‘ಭಾರತ ಕ್ರಿಕೆಟ್‌ ಬಗ್ಗೆ ಅವರು ಹೊಂದಿದ್ದ ಮಹತ್ವಾಕಾಂಕ್ಷೆಗಳು ಮುಗಿದಿರಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ. ಇದೇ ವರ್ಷ ಸೆಪ್ಟೆಂಬರ್‌–ಅಕ್ಟೋಬರ್‌ಗೆ ನಿಗದಿಯಾಗಿರುವ ಟಿ20 ವಿಶ್ವಕಪ್‌ ತಂಡದಲ್ಲಿ ಇರಬಲ್ಲರು ಎಂದು ನನಗನಿಸುತ್ತಿಲ್ಲ. ಒಂದು ವೇಳೆ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದ್ದಿದ್ದರೆ, ವಿಶ್ವಕಪ್‌ ತಂಡದಲ್ಲಿ ಆಡುತ್ತಿದ್ದರು. ಆದರೆ, ಈಗ ಅವರ ಕೈಯಲ್ಲಿ ಏನೂ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ತಿಂಗಳು 29 ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ಏಪ್ರಿಲ್‌ 15ರ ವರೆಗೆ ಮುಂದೂಡಲಾಗಿದೆ. ಆದಾಗ್ಯೂಧೋನಿ ಐಪಿಎಲ್‌ನಲ್ಲಿ ಚೆನ್ನೈ ಪ್ರಾಂಚೈಸ್‌ ಪರ ಮುಂದುವರಿಯುವ ಸಾಧ್ಯತೆ ಇದೆ ಎಂದೂ ಬೋಗ್ಲೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.