ಬ್ರಿಸ್ಬೇನ್, ಆಸ್ಟ್ರೇಲಿಯಾ: ಕೇವಲ 42 ಎಸೆತಗಳಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಗ್ರೇಸ್ ಹ್ಯಾರಿಸ್ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಎರಡನೇ ಆಟಗಾರ್ತಿ ಎಂದೆನಿಸಿಕೊಂಡರು.
ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್)ನಲ್ಲಿ ಪರ ಆರಂಭಿಕ ಬ್ಯಾಟ್ಸ್‌ವುಮನ್ ಆಗಿ ಕ್ರೀಸ್‌ಗೆ ಇಳಿದ ಅವರು ಮೆಲ್ಬರ್ನ್ ಸ್ಟಾರ್ಸ್ ಎದುರಿನ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ಸ್‌ಗೆ 10 ವಿಕೆಟ್‌ಗಳ ಜಯ ಗಳಿಸಿಕೊಟ್ಟರು. ಅಜೇಯ 101 ರನ್ ಗಳಿಸಿದ ಅವರ ಇನಿಂಗ್ಸ್‌ನಲ್ಲಿ ಆರು ಸಿಕ್ಸರ್‌ಗಳು ಮತ್ತು 13 ಬೌಂಡರಿಗಳಿದ್ದವು.
ಗ್ರೇಸ್ 95 ರನ್ ಗಳಿಸಿದ್ದಾಗ ಹೀಟ್ಸ್ ತಂಡದ ಜಯಕ್ಕೆ ಕೇವಲ ಒಂದು ರನ್ ಬೇಕಾಗಿತ್ತು. ಆಗ ಅವರು ಚೆಂಡನ್ನು ಸಿಕ್ಸರ್‌ಗೆ ಎತ್ತಿ ತಂಡವನ್ನು ಜಯದ ದಡ ಸೇರಿಸಿದರು; ಶತಕವನ್ನೂ ಪೂರೈಸಿದರು.
ದಕ್ಷಿಣ ಆಫ್ರಿಕಾ ಎದುರು 2010ರಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಪಂದ್ಯದಲ್ಲಿ 38 ಎಸೆತಗಳಲ್ಲಿ ಮೂರಂಕಿ ದಾಟಿದ್ದ ಡ್ಯಾಂಡ್ರ ಡಾಟಿನ್ ವೇಗದ ಶತಕ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.
47 ಎಸೆತಗಳಲ್ಲಿ ಶತಕ ಗಳಿಸಿದ್ದ ಆ್ಯಶ್ಲಿ ಗಾರ್ಡನರ್ ಅವರು ಬಿಗ್ ಬ್ಯಾಷ್ ಲೀಗ್‌ನಲ್ಲಿ ವೇಗದ ಶತಕ ಗಳಿಸಿದ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದರು. ಆಸ್ಟ್ರೇಲಿಯಾ ಪರ ಒಂಬತ್ತು ಏಕದಿನ ಮತ್ತು 11 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮೆಲ್ಬರ್ನ್ ಸ್ಟಾರ್ಸ್: 20 ಓವರ್‌ಗಳಲ್ಲಿ 7ಕ್ಕೆ 132 (ಆ್ಯಂಜೆಲಾ ರೀಕ್ಸ್ 30; ಸ್ಯಾಮಿ ಜಾನ್ಸನ್ 30ಕ್ಕೆ2, ಜೆಸ್ ಜಾನ್ಸನ್ 17ಕ್ಕೆ 3); ಬ್ರಿಸ್ಬೇನ್ ಹೀಟ್ಸ್: 10.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 138 (ಬೇತ್ ಮೂನಿ 28, ಗ್ರೇಸ್ ಹ್ಯಾರಿಸ್ 101). ಫಲಿತಾಂಶ: ಬ್ರಿಸ್ಬೇನ್ ಹೀಟ್ಸ್‌ಗೆ 10 ವಿಕೆಟ್‌ಗಳ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.