ADVERTISEMENT

Tokyo Olympics| ಭಾರತ ಹಾಕಿ ತಂಡಕ್ಕೆ ನ್ಯೂಜಿಲೆಂಡ್ ಮೊದಲ ಸವಾಲು

ಭಾರತ ಹಾಕಿ ತಂಡಕ್ಕೆ ಮೊದಲ ಸವಾಲು; ನ್ಯೂಜಿಲೆಂಡ್ ಮುಖಾಮುಖಿ

ಪಿಟಿಐ
Published 23 ಜುಲೈ 2021, 18:36 IST
Last Updated 23 ಜುಲೈ 2021, 18:36 IST
   

ಟೋಕಿಯೊ: ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡವು ಇತಿಹಾಸ ರಚಿಸುವ ಹುಮ್ಮಸ್ಸಿನಲ್ಲಿದೆ.

40 ವರ್ಷಗಳಿಂದ ಒಲಿಯದ ಒಲಿಂಪಿಕ್ ಪದಕವನ್ನು ಕೊರಳಿಗೇರಿಸಿಕೊಂಡು ಬರುವ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆಯಲಿದೆ. ಎ ಗುಂಪಿನಲ್ಲಿ ಕಣಕ್ಕಿಳಿಯಲಿರುವ ಭಾರತ ಹಾಕಿ ತಂಡವು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವಾಡಲಿದೆ. ಎಂಟನೇ ರ‍್ಯಾಂಕ್‌ ನ ನ್ಯೂಜಿಲೆಂಡ್ ತಂಡಕ್ಕಿಂತ ಭಾರತವು ಬಲಿಷ್ಠವಾಗಿದೆ. ಕಿವೀಸ್ ತಂಡವನ್ನು 11 ಬಾರಿ ಎದುರಿಸಿರುವ ಭಾರತ ತಂಡವು ಎಂಟು ಬಾರಿ ಜಯಿಸಿದೆ.

ಒಲಿಂಪಿಕ್ ಹಾಕಿಯಲ್ಲಿ ಸುವರ್ಣಯುಗದ ದಾಖಲೆ ಹೊಂದಿರುವ ಭಾರತ ತಂಡಕ್ಕೆ ಕಳೆದ ನಾಲ್ಕು ದಶಕಗಳಿಂದ ಪದಕ ಜಯಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವ ತಂಡದಿಂದ ಈ ಬಾರಿ ಸಾಧನೆ ಮೂಡಿಬರುವ ಭರವಸೆ ಇದೆ.

ADVERTISEMENT

1964ರಲ್ಲಿ ಟೋಕಿಯೊದಲ್ಲಿಯೇ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಪದಕ ಜಯಿಸಿತ್ತು. ಈಗ ಮತ್ತೊಮ್ಮೆ ಇದೇ ತಾಣದಲ್ಲಿ ಮತ್ತೆ ವಿಜಯೋತ್ಸವ ಆಚರಿಸುವ ಕನಸು ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.