ADVERTISEMENT

ತವರಿಗೆ ತೆರಳದ ರಿಕಿ ಪಾಂಟಿಂಗ್

ಪಿಟಿಐ
Published 11 ಮೇ 2025, 13:24 IST
Last Updated 11 ಮೇ 2025, 13:24 IST
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ರಿಕಿ ಪಾಂಟಿಂಗ್‌ –ಪಿಟಿಐ ಚಿತ್ರ
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ರಿಕಿ ಪಾಂಟಿಂಗ್‌ –ಪಿಟಿಐ ಚಿತ್ರ   

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಕಾರಣಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದಾಗ ಕೆಲವು ತಂಡಗಳ ವಿದೇಶಿ ಆಟಗಾರರು ತಮ್ಮ ತವರಿಗೆ ತೆರಳಿದರು.

ಆದರೆ ಪಂಜಾಬ್‌ ಕಿಂಗ್ಸ್ ತಂಡದ ಮುಖ್ಯ ಕೋಚ್ ಮತ್ತು ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಅವರು ಮಾತ್ರ ತವರಿಗೆ ಮರಳುವ ತಮ್ಮ ನಿರ್ಧಾರ ಬದಲಿಸಿ ಇಲ್ಲಿಯೇ ಉಳಿದುಕೊಂಡರು. ಅಲ್ಲದೇ ತಮ್ಮ ತಂಡದಲ್ಲಿರುವ ವಿದೇಶಿ ಆಟಗಾರರೂ ಇಲ್ಲಿಯೇ ಉಳಿಯುವಂತೆ ಮನವೊಲಿಸಿದರು. ಶನಿವಾರ ಅವರು ಆಸ್ಟ್ರೇಲಿಯಾದ ವಿಮಾನವೇರಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ತಮ್ಮ ನಿರ್ಣಯ ಬದಲಿಸಿದರು. 

‘ಇದು ಪಾಂಟಿಂಗ್ ಅವರ ಸ್ವಭಾವ. ಉಳಿದೆಲ್ಲ ಆಟಗಾರರಲ್ಲಿ ಧೈರ್ಯ ತುಂಬಿ ಮನಪರಿವರ್ತನೆ ಮಾಡಲು ಅವರಿಂದ ಮಾತ್ರ ಸಾಧ್ಯವಾಗಿತ್ತು’ ಎಂದು ಪಂಜಾಬ್ ಕಿಂಗ್ಸ್‌ ಫ್ರ್ಯಾಂಚೈಸಿಯ ಮುಖ್ಯ ಕಾರ್ಯನಿರ್ವಹಣಾ ಆಧಿಕಾರಿ ಸತೀಶ್ ಮೆನನ್ ಹೇಳಿದರು. ತಂಡದ ಆಟಗಾರರೊಂದಿಗೆ ಪಾಂಟಿಂಗ್ ನಡೆಸಿದ ‘ಪೆಪ್ ಟಾಕ್’ ಸಂದರ್ಭದಲ್ಲಿ ಮೆನನ್ ಕೂಡ ಹಾಜರಿದ್ದರಂತೆ.

ADVERTISEMENT

ಮೇ 8ರಂದು ಧರ್ಮಶಾಲದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ತಂಡದ ಆಟಗಾರರು, ಸಿಬ್ಬಂದಿಗಳನ್ನು ರಸ್ತೆ ಮತ್ತು ರೈಲು ಪ್ರಯಾಣದ ಮೂಲಕ ದೇಶದ ರಾಜಧಾನಿಗೆ ಸುರಕ್ಷಿತವಾಗಿ ಕರೆತರಲಾಗಿತ್ತು. ಅದರಲ್ಲಿ ಪಂಜಾಬ್ ತಂಡದಲ್ಲಿ ಆಡುವ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್,  ಆ್ಯರನ್ ಹಾರ್ಡೀ, ಜೋಶ್ ಇಂಗ್ಲಿಸ್ ಮತ್ತು ಝೇವಿಯರ್ ಬಾರ್ಟಲೆಟ್ ಅವರೂ ಇದ್ದರು. 

‘ವಿದೇಶಗಳಿಂದ ಬಂದ ಆಟಗಾರರಿಗೆ ಇಂತಹ  ತುರ್ತು ಪರಿಸ್ಥಿತಿಯ ಅರಿವು ಇರುವುದಿಲ್ಲ. ಆದ್ದರಿಂದ ಅವರು ಗಾಬರಿಗೊಳಗಾಗುವುದು ಸಹಜ. ಸ್ಟೊಯಿನಿಸ್ ಸೇರಿದಂತೆ ಎಲ್ಲ ವಿದೇಶಿ ಆಟಗಾರರೂ ತಮ್ಮ ತವರು ದೇಶಗಳಿಗೆ ಮರಳಲು ಸಿದ್ಧರಾಗಿದ್ದರು. ಆದರೆ ಪಾಂಟಿಂಗ್ ಅವರೇ ಎಲ್ಲರ ಮನವೊಲಿಸಿದರು. ಇಲ್ಲಿಯೇ ಉಳಿದುಕೊಳ್ಳುವಂತೆ ಮಾಡಿದರು’ ಎಂದು ತಂಡದ ಮೂಲಗಳು ತಿಳಿಸಿವೆ.

ತಂಡದ ಎಡಗೈ ವೇಗಿ, ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸೆನ್ ಅವರೊಬ್ಬರು ಮಾತ್ರ ತಮ್ಮ ತವರಿಗೆ ಮರಳಿದ್ದಾರೆ. ದುಬೈಗೆ ಇದ್ದ ಏಕೈಕ ವಿಮಾನದ ಮೂಲಕ ಪ್ರಯಾಣಿಸಿದರು ಎಂದೂ ಮೂಲಗಳು ತಿಳಿಸಿವೆ. 

ಪಾಂಟಿಂಗ್ ಅವರ ಪ್ರಯತ್ನದಿಂದ ತಂಡದ ಬಹುತೇಕ ಎಲ್ಲ ಆಟಗಾರರೂ ಭಾರತದಲ್ಲಿಯೇ ಇದ್ದಾರೆ. ಇದೀಗ ಟೂರ್ನಿಯು ಮರು ಆರಂಭಗೊಳ್ಳುತ್ತಿರುವುದರಿಂದ ತಂಡ ಸಂಯೋಜನೆಯು ಸುಲಭವಾಗಲಿದೆ. ಮುಂಬರುವ ಹಂತದಲ್ಲಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಬಹುದು ಎಂದೂ ಫ್ರ್ಯಾಂಚೈಸಿಯ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.